ADVERTISEMENT

ಬಿಜೆಪಿ–ಜೆಡಿಎಸ್‌ ವಿರುದ್ಧ ಸಿದ್ದು ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 9:40 IST
Last Updated 4 ಮಾರ್ಚ್ 2014, 9:40 IST

ಮಧುಗಿರಿ: ಬಿಜೆಪಿ ಕೋಮುವಾದಿ. ಜೆಡಿಎಸ್‌ ಅಪ್ಪ-ಮಕ್ಕಳ ಪಕ್ಷ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಸೋಮವಾರ ಕಾಂಗ್ರೆಸ್‌ ಕಾರ್ಯ­ಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಎರಡೂ ಪಕ್ಷಗಳ ನಾಯಕರನ್ನು ಟೀಕಿಸಿದರು. ನರೇಂದ್ರ ಮೋದಿ ಪ್ರಭಾವ ರಾಜ್ಯದಲ್ಲಿ ನಡೆಯುವುದಿಲ್ಲ ಎಂದರು.

ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಈಗಾಗಲೇ ಪ್ರಧಾನಮಂತ್ರಿ ಆದಂತೆ ಭ್ರಮೆ­ಯಲ್ಲಿ­ದ್ದಾರೆ. ನರಹತ್ಯೆ ಮಾಡಿದ ಕಳಂಕ ಹೊತ್ತಿರುವ ಮೋದಿ ಅಕ್ಕಪಕ್ಕ ಜೈಲಿಗೆ ಹೋಗಿ ಬಂದವರು ಕುಳಿ­ತಿ­ರುತ್ತಾರೆ.

ಮೋದಿ ಭ್ರಷ್ಟಾಚಾರದ ಬಗ್ಗೆ ಮಾತ­ನಾಡುತ್ತಾರೆ. ಬಿಜೆಪಿ ಮೇಲ್ವರ್ಗದ ಮತ್ತು ಶ್ರೀಮಂತರ ಪರ ನಿಲುವು ಹೊಂದಿದೆ. ದಲಿತರು ಮತ್ತು ಅಲ್ಪಸಂಖ್ಯಾತರ ವಿರೋಧಿ ಎಂದು ಟೀಕಿಸಿದರು.

ಸರ್ಕಾರ ಏನೇನು ಮಾಡಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದ ಸಂದರ್ಭ, ಮೊದಲು ನಮಗೆ ನೀರು ಕೊಡಿ ಎಂದು ಜನರು ಕೂಗಿ­ದರು. ಎತ್ತಿನಹೊಳೆ ಯೋಜನೆಯಿಂದ ತಾಲ್ಲೂಕಿನ 45 ಕೆರೆಗಳಿಗೆ ನೀರು ಬರುತ್ತದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಶಾಸಕ ಕೆ.ಎನ್‌.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ, ಸಚಿವ ಟಿ.ಬಿ.ಜಯಚಂದ್ರ, ಶಾಸಕ ಎಂ.ಆರ್‌.ಸೀತಾ­ರಾಮು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಷಫೀಅಹ್ಮದ್‌, ಪುರಸಭೆ ಅಧ್ಯಕ್ಷ ಎನ್‌.ಗಂಗಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುನಂದಾ ಇತರರು ಭಾಗವಹಿಸಿದ್ದರು.

ವಿರೋಧವಿಲ್ಲ: ಜಿಎಸ್‌ಬಿ
ಮಧುಗಿರಿ: ಎತ್ತಿನ ಹೊಳೆ ಯೋಜನೆ ಜಾರಿಗೆ ವಿರೋಧ ಮಾಡುವುದಿಲ್ಲ. ಆದರೆ ಸರ್ಕಾರ ಪರಮಶಿವಯ್ಯ ವರದಿ ಜಾರಿ ಮಾಡಿದರೆ ಜಿಲ್ಲೆಗೆ 50ರಿಂದ 60 ಟಿಎಂಸಿ ನೀರು ದೊರೆಯುತ್ತದೆ ಎಂದು ಸಂಸದ ಜಿ.ಎಸ್‌.ಬಸವರಾಜು ಹೇಳಿದರು.

ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿ. ಎಚ್‌ಎಎಲ್‌ ಯೋಜನೆಗೆ ಭೂಮಿ ನೀಡುವಂತೆ ಕೋರಿದರು.

ತುಮಕೂರು ವಿಶ್ವವಿದ್ಯಾನಿಲಯ ಕ್ಯಾಂಪಸ್‌ಗೆ ಭೂಮಿ ನೀಡಬೇಕು. ಕುಡಿಯುವ ನೀರಿಗಾಗಿ ನದಿ ಮೂಲದಿಂದ ನೀರು ತರುವ ಮೂಲಕ ಶಾಶ್ವತ ಯೋಜನೆ ರೂಪಿಸಬೇಕು ಎಂದು ಶಾಸಕ ಡಾ.ಎಂ.ಆರ್‌.ಹುಲಿನಾಯ್ಕರ್‌ ಕೋರಿದರು.

ಸಚಿವ ಸ್ಥಾನಕ್ಕೆ ಕಾಲ ಬರಲಿ
ಶಾಸಕ ಕೆ.ಎನ್‌.ರಾಜಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾರ್ಯಕರ್ತರು ಕೂಗಿದರು. ರಾಜಣ್ಣಗೆ ಸಚಿವರಾಗುವ ಸಾಮರ್ಥ್ಯವಿದೆ. ಕಾಲ ಬರಲಿ, ಮುಂದೆ ಯೋಚನೆ ಮಾಡುತ್ತೇನೆಂದು ಸಿದ್ದರಾಮಯ್ಯ ಹೇಳಿದರು.

ಸೋನಿಯಾ, ರಾಹುಲ್‌ ಪ್ರಧಾನಿ!
ದೇಶದ ಪ್ರಧಾನ ಮಂತ್ರಿಗಳಾದ ಸೋನಿಯಾ­ಗಾಂಧಿ, ರಾಹುಲ್‌ಗಾಂಧಿ.... ಎಂದೇ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ಭಾಷಣ ಆರಂಭಿಸಿ ಎಲ್ಲರಲ್ಲಿ ಅಚ್ಚರ ಮೂಡಿಸಿದರು.

ಮುನಿಯಪ್ಪ ಮಾತನಾಡುತ್ತಿದ್ದ ಸಂದರ್ಭ ಸಿದ್ದರಾಮಯ್ಯ ಅವರಿಗೆ ಸನ್ಮಾನ ಮಾಡಲು ನೂಕುನುಗ್ಗಲು ಉಂಟಾಯಿತು. ಇದರಿಂದ ಸಿಟ್ಟಿಗೆದ್ದ ಸಚಿವರು ಕಾರ್ಯಕರ್ತರಿಗೆ ಮೈಕ್‌ನಲ್ಲೇ ಬೈದು ಕೆಳಗೆ ತಳ್ಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.