ADVERTISEMENT

ಬಿಜೆಪಿ ಕಾರ್ಯಕರ್ತನಿಗೆ ಚಪ್ಪಲಿಯಿಂದ ಹಲ್ಲೆ

ಶಾಸಕ ಗೌರಿಶಂಕರ್ ಬೆಂಬಲಿಗರಿಂದ ನಿರಂತರ ಕೃತ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 10:13 IST
Last Updated 3 ಜೂನ್ 2018, 10:13 IST

ತುಮಕೂರು: ಶನಿವಾರ ಬೆಳಿಗ್ಗೆ ನೆಲಹಾಳ ಗ್ರಾಮದ ನರಸಿಂಹಯ್ಯ ಎಂಬ ಬಿಜೆಪಿ ಕಾರ್ಯಕರ್ತರಿಗೆ ಆತನ ಪತ್ನಿ ಎದುರೇ ಶಾಸಕ ಡಿ.ಸಿ.ಗೌರಿಶಂಕರ್ ಅವರ ಬೆಂಬಲಿಗರು ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಬಿ.ಸುರೇಶ್‌ಗೌಡ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವಿಧಾನ ಸಭೆ ಚುನಾವಣೆ ಬಳಿಕ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕರ ಬೆಂಬಲಿಗರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಿದ್ದಾರೆ’ ಎಂದು ದೂರಿದರು.

‘ನರಸಿಂಹಯ್ಯ ಮತ್ತು ಆತನ ಪತ್ನಿ ನಾಗರತ್ನಮ್ಮ ಅವರು ಗ್ರಾಮದಲ್ಲಿ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ಅಡ್ಡಗಟ್ಟಿದ ಶಾಸಕರ ಬೆಂಬಲಿಗ ಬೋಗಣ್ಣ ಮತ್ತಿತರರು ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತ ಹಾಕಿಸಿದ್ದಿಯಾ? ನೀನು ಊರಲ್ಲಿ ಹೇಗೆ ಜೀವನ ನಡೆಸುವೆಯೋ ನೋಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಕೋರಾ ಠಾಣೆಗೆ ದೂರು ಸಲ್ಲಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ದೂರು ನೀಡಲಾಗುತ್ತಿದೆ. ತಕ್ಷಣ ಆರೋಪಿಗಳನ್ನು ಬಂಧಿಸಬೇಕು. ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ನೀಡಬೇಕು. ಹಲ್ಲೆ ಪ್ರಕರಣ ಮುಚ್ಚಿಹಾಕಿ ರಾಜಿ ಸಂಧಾನ ಮಾಡುವ ಪ್ರಯತ್ನ ಪೊಲೀಸರು ಮಾಡಬಾರದು ಎಂದು ಹೇಳಿದರು.

‘ಚುನಾವಣೆ ಮುಗಿದ ನಾಲ್ಕೈದು ದಿನಗಳಲ್ಲಿಯೇ ನಮ್ಮ ಕಾರ್ಯಕರ್ತರಿಗೆ ಬೆದರಿಕೆ, ಮನೆ ಮುಂದೆ ಹೋಗಿ ಪಟಾಕಿ ಸಿಡಿಸುವುದು, ಸೋಬಾನೆ ಪದ ಹಾಡುವಂತಹ ಕೃತ್ಯಗಳನ್ನು ಶಾಸಕರ ಬೆಂಬಲಿಗರು ಮಾಡಿದ್ದರು. ಆಗಲೇ ನಾನು ಇಂತಹ ಪ್ರಚೋದನಕಾರಿ ಕೃತ್ಯ ಸರಿಯಲ್ಲ. ಶಾಸಕರು ತಮ್ಮ ಬೆಂಬಲಿಗರಿಗೆ ಸೂಚಿಸಿ ಕ್ಷೇತ್ರದಲ್ಲಿ ಜನರು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದೆ. ಆದರೆ, ಮತ್ತಷ್ಟು ಇಂತಹ ಪ್ರಕರಣಗಳು ನಡೆಯುತ್ತಿವೆ’ ಎಂದು ಆರೋಪಿಸಿದರು.

ಇದೇ ರೀತಿ ಪ್ರಕರಣ ಮುಂದುವರಿದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಶಾಸಕರ ವಿರುದ್ಧ ಧರಣಿ ನಡೆಸಲಾಗುವುದು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೇ ನೇರವಾಗಿ ದೂರು ನೀಡಲಾಗುವುದು. ಅಲ್ಲದೇ, ಸದನದಲ್ಲಿ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಮೂಲಕ ಪ್ರಕರಣ ಪ್ರಸ್ತಾಪಿಸಿ ನ್ಯಾಯಕ್ಕಾಗಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ನರಸಿಂಹಯ್ಯ ಮಾತನಾಡಿ, ‘ಪತ್ನಿಯೊಂದಿಗೆ ದ್ವಿಚಕ್ರವಾಹನದಲ್ಲಿ ಗ್ರಾಮದಿಂದ ತುಮಕೂರು ಕಡೆಗೆ ಬರುತ್ತಿದ್ದಾಗ ಬೋಗಣ್ಣ ಅವರ ಮಗ ನರಸಿಂಹಮೂರ್ತಿ ಮತ್ತು ಶಿವರಾಜ್ ಹಾಗೂ ಕುಮಾರ್ ಮತ್ತು ದೊಡ್ಡಯ್ಯ ಎಂಬುವರು ಚಪ್ಪಲಿಯಿಂದ ಹಲ್ಲೆ ನಡೆಸಿದರು’ ಎಂದು ಹೇಳಿದರು.

‘ದೂರು ಕೊಟ್ಟರೆ ಒಕ್ಕಲಿಗನಾದ ನಿನ್ನ ವಿರುದ್ಧ ಜಾತಿನಿಂದನೆ ಪ್ರಕರಣವನ್ನು ದಾಖಲಿಸಿ ಪೊಲೀಸ್ ಠಾಣೆಗೆ ಅಲೆದಾಡುವಂತೆ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದರು ಎಂದು ವಿವರಿಸಿದರು.

ಮಾಜಿ ಶಾಸಕ ಬಿ.ಸುರೇಶ್‌ಗೌಡ ಹಾಗೂ ಪೊಲೀಸರು ರಕ್ಷಣೆ ನೀಡಿದರೆ ಗ್ರಾಮದಲ್ಲಿ ವಾಸಿಸುತ್ತೇನೆ. ಇಲ್ಲದೇ ಇದ್ದರೆ ಗ್ರಾಮ ತೊರೆಯುತ್ತೇನೆ ಎಂದು ಪತ್ನಿ ನಾಗರತ್ನಮ್ಮ ಅವರೊಂದಿಗೆ ಕಣ್ಣೀರು ಹಾಕಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಗೂಳೂರು ಶಿವಕುಮಾರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಂಗಾಂಜನೇಯ, ಉಪಾಧ್ಯಕ್ಷ ಶಾಂತಕುಮಾರ್ ಗೋಷ್ಠಿಯಲ್ಲಿದ್ದರು.

ಜಾತಿ ನಿಂದನೆ ಪ್ರಕರಣ ದಾಖಲು

‘ನಮ್ಮ ಕಾರ್ಯಕರ್ತ ನರಸಿಂಹಯ್ಯನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿ ಆತನ ವಿರುದ್ಧವೇ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ. ಇದಕ್ಕೆ ಹಿರೇಹಳ್ಳಿ ಮಹೇಶ್, ಶಾಸಕರ ಸಹೋದರ ವೇಣುಗೋಪಾಲ್, ಅನಂತು ಎಂಬುವವರು ಕುಮ್ಮಕ್ಕು ನೀಡಿದ್ದಾರೆ’ ಎಂದು ಸುರೇಶ್‌ಗೌಡ ಆರೋಪಿಸಿದರು. ‘ಹತ್ತು ವರ್ಷ ಕ್ಷೇತ್ರದಲ್ಲಿ ನಾನು ಶಾಸಕನಾಗಿದ್ದಾಗ ಒಂದೇ ಒಂದು ಜಾತಿ ನಿಂದನೆ ಪ್ರಕರಣ ದಾಖಲಾಗಿರಲಿಲ್ಲ. ಈಗ ಜೆಡಿಎಸ್ ಶಾಸಕರು ಅದಕ್ಕೆ ಮುಂದಾಗಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.