ADVERTISEMENT

ಬೆಂಕಿ ತಗುಲಿ ಕೊಬ್ಬರಿ, ಗೊಬ್ಬರ ನಾಶ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 9:37 IST
Last Updated 6 ಏಪ್ರಿಲ್ 2013, 9:37 IST

ಗುಬ್ಬಿ: ತಾಲ್ಲೂಕಿನ ನಾಗಸಂದ್ರ (ಕೆ.ಜಿ.ಟೆಂಪಲ್) ಗ್ರಾಮದಲ್ಲಿ ಶುಕ್ರವಾರ ರತ್ನಮ್ಮ ಎಂಬುವವರು ಸಂಗ್ರಹಿಸಿದ್ದ 50 ಸಾವಿರ ಕೊಬ್ಬರಿ ಮತ್ತು 80 ಚೀಲ ರಾಸಾಯನಿಕ ಗೊಬ್ಬರಕ್ಕೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ.

ರತ್ನಮ್ಮ ಎಸ್‌ಎಲ್‌ಎನ್ ಟ್ರೇಡರ್ಸ್‌ನಲ್ಲಿ ರಾಸಾಯನಿಕ ಗೊಬ್ಬರದ ಮಾರಾಟ ಮಾಡುತ್ತಿದ್ದರು. ಹೆಚ್ಚಿನ  ಗೊಬ್ಬರ ದಾಸ್ತಾನನ್ನು ಮಳಿಗೆ ಹಿಂಭಾಗದಲ್ಲಿ ಸಂಗ್ರಹಿಸಿದ್ದರು. ಇದರ ಸಮೀಪದ ಗೋದಾಮಿನಲ್ಲಿ ಸಂಗ್ರಹಿಸಿದ್ದ ಸುಮಾರು 50 ಸಾವಿರ ಕೊಬ್ಬರಿ ಸಹ ಸುಟ್ಟು ಕರಕಲಾಗಿದೆ.  ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಸಿ.ಎಸ್.ಪುರ ಪೊಲೀಸರು ಸ್ಥಳ ಪರಿಶೀಲಿಸಿದರು.

ಬೆಂಕಿಗೆ ಹಸು,  ಕೊಬ್ಬರಿ ದಹನ
ಗುಬ್ಬಿ: ತಾಲ್ಲೂಕಿನ ಕಿಟ್ಟದಕುಪ್ಪೆ ಗ್ರಾಮದಲ್ಲಿನ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಒಂದು ಹಸು, 4 ಸಾವಿರ ಕೊಬ್ಬರಿ ಹಾಗೂ ಸೈಕಲ್‌ಗಳು ಸುಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.

ಕಿಟ್ಟದಕುಪ್ಪೆ ಗ್ರಾಮದ ಮುಕ್ಕಣ್ಣ ಎಂಬುವರ ಕೊಟ್ಟಿಗೆಗೆ ಇದ್ದಕ್ಕಿದಂತೆ ಬೆಂಕಿ ಕಾಣಿಸಿಕೊಂಡಿದೆ. ಗ್ರಾಮಸ್ಥರ ಗಮನಕ್ಕೆ ಬರುವ ವೇಳೆಗೆ  ಕಟ್ಟಿಹಾಕಿದ್ದ ಹಸು, ಕೊಬ್ಬರಿ ಸುಟ್ಟು ಕರಕಲಾಗಿದ್ದವು. ಒಟ್ಟು ಕೊಬ್ಬರಿ ಮೌಲ್ಯ 75 ಸಾವಿರ ರೂಪಾಯಿ. ಸಮೀಪದಲ್ಲಿ ಇದ್ದ ಮೂರು ಬೈಸಿಕಲ್,  ಒಂದು ಟ್ರ್ಯಾಕ್ಟರ್ ನಷ್ಟು ಹುಲ್ಲು ಸಹ ಭಸ್ಮವಾಗಿದೆ.

ಸ್ಥಳಕ್ಕೆ ಪಶು ವೈದ್ಯ ಡಾ.ಲಿಂಗರಾಜಣ್ಣ,  ಗುಬ್ಬಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗುಡಿಸಲಿಗೆ ಬೆಂಕಿ; ಲಕ್ಷಾಂತರ ನಷ್ಟ
ಶಿರಾ: ನಗರದ ಸ್ಲಂಗಳಲ್ಲಿ ಒಂದಾದ ಮುಚ್ಚಿಗರಹಟ್ಟಿಯಲ್ಲಿ ಶುಕ್ರವಾರ ಮದ್ಯಾಹ್ನ ಆಕಸ್ಮಿಕ ಬೆಂಕಿಗೆ 3 ಗುಡಿಸಲು, 2 ಗೋದಾಮು ಸಂಪೂರ್ಣ ಭಸ್ಮಗೊಂಡಿದ್ದು ಅಪಾರ ನಷ್ಟವಾಗಿದೆ.

ಗುಡಿಸಲುಗಳ ಪೈಕಿ ಆಯಿಷಾ ಬಾನು ಎನ್ನುವರ ಮನೆಯಲ್ಲಿ ಮದುವೆಗೆಂದು ಸಂಗ್ರಹಿಸಿದ್ದ ಬಟ್ಟೆ, ಒಡವೆ, ನಿತ್ಯ ಬಳಕೆ ವಸ್ತುಗಳು ಆಹಾರ ಪದಾರ್ಥ ಸೇರಿದಂತೆ ಎರಡು ಲಕ್ಷ ರೂಪಾಯಿಗೂ ಹೆಚ್ಚಿನ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಂದಾಜಿಸಲಾಗಿದೆ.

ಗುಡಿಸಲುಗಳಲ್ಲಿದ್ದ ಬಾಳೆಹಣ್ಣಿನ ಗೋದಾಮು ಮತ್ತು ಗೋಣಿ ಚೀಲ ತುಂಬಿದ್ದ ಪೆಟ್ಟಿಗೆ ಅಂಗಡಿಯೂ ಸೇರಿದ್ದು, 4 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಪದಾರ್ಥಗಳು ಬೆಂಕಿಗೆ ಆಹುತಿಯಾಗಿವೆ.

ನಗರ ಅಗ್ನಿಶಾಮಕ ದಳದ ಎರಡು ವಾಹನಗಳು ಬೆಂಕಿ ನಂದಿಸಲು ಶ್ರಮಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸ್ಥಳಕ್ಕೆ ಮಾಜಿ ಸಚಿವ ಬಿ.ಸತ್ಯನಾರಾಯಣ, ಶಾಸಕ ಟಿ.ಬಿ.ಜಯಚಂದ್ರ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ. ತಹಶೀಲ್ದಾರ್ ಕಾಂತರಾಜು, ನಗರಾಯುಕ್ತ ಬಿ.ಟಿ.ರಂಗಸ್ವಾಮಿ, ಸಿಪಿಐ ಪ್ರಹ್ಲಾದ್ ಘಟನಾಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.