ADVERTISEMENT

ಬ್ಯಾಂಕ್, ರೈತರಿಗೆ ಇಕ್ಕಟ್ಟು-ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 7:15 IST
Last Updated 28 ಜನವರಿ 2012, 7:15 IST

ವಿಶೇಷ ವರದಿ
ತುಮಕೂರು: ಜಿಲ್ಲೆಯ ಆರು ಬರಪೀಡಿತ ತಾಲ್ಲೂಕುಗಳಲ್ಲಿ ಅಣೇವಾರಿ ಘೋಷಣೆಯಾಗದೆ ರೈತರು ಹಾಗೂ ವಾಣಿಜ್ಯ ಬಾಂಕ್‌ಗಳು ಇಕ್ಕಟ್ಟಿಗೆ ಸಿಲುಕಿವೆ.

ಬರಪೀಡಿತ ಜಿಲ್ಲೆಯ ರೈತರಿಗೆ ಬ್ಯಾಂಕ್‌ಗಳು ನೇರವಾಗಿ ಸಾಕಷ್ಟು ಸೌಲಭ್ಯ ನೀಡಬೇಕಾಗಿದೆ. ಆದರೆ ಹೀಗೆ ಸೌಲಭ್ಯ ನೀಡುವ ಮುನ್ನ ಜಿಲ್ಲಾಧಿಕಾರಿ ತಾಲ್ಲೂಕುವಾರು ಅಣೇವಾರಿ ಘೋಷಿಸಬೇಕಾಗಿದೆ.

ತುಮಕೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್ ಪಾವಗಡ, ಶಿರಾ, ಮಧುಗಿರಿ ತಾಲ್ಲೂಕನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿ ತಿಂಗಳುಗಳೇ ಕಳೆದಿವೆ. ರಾಜ್ಯ ಸರ್ಕಾರ ಬರಪೀಡಿತ ಜಿಲ್ಲೆಗಳಲ್ಲಿ ಅಣೇವಾರಿ ಘೋಷಿಸಿರುವುದಾಗಿ ತಿಳಿಸಿದೆ. ಆದರೆ ಸರ್ಕಾರ ಅಣೇವಾರಿ ಘೋಷಿಸಿದರೂ ಜಿಲ್ಲಾಧಿಕಾರಿ ಮತ್ತೊಮ್ಮೆ ಹೋಬಳಿವಾರು ಅಣೇವಾರಿ ಘೋಷಿಸಬೇಕು. ಇದು ಘೋಷಣೆಯಾಗದೆ ಬರಗಾಲದ ಯಾವುದೇ ಸೌಲಭ್ಯ ನೀಡಲು ಬ್ಯಾಂಕ್‌ಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.
ಬರಪೀಡಿತ ತಾಲ್ಲೂಕುಗಳಲ್ಲಿ ರೂ. 270 ಕೋಟಿ ಬೆಳೆ ನಷ್ಟ ಉಂಟಾಗಿದೆ ಎಂಬ ವರದಿಯನ್ನು ಜಿಲ್ಲಾಡಳಿತ ಸರ್ಕಾರಕ್ಕೆ ನೀಡಿದೆ. ಕೇಂದ್ರದಿಂದಲೂ ಬರ ಅಧ್ಯಯನ ತಂಡ ಜಿಲ್ಲೆಗೆ ಭೇಟಿ ನೀಡಿ ಅಧ್ಯಯನ ನಡೆಸಿ ತೆರಳಿದೆ.
 
ಈ ಎರಡು ವರದಿ ಆಧಾರದಲ್ಲಿ ಹೋಬಳಿವಾರು ಬೆಳೆ ವಿಮೆ ಘೋಷಣೆಯಾಗಲಿದೆ. ಅಣೇವಾರಿ ಘೋಷಣೆಯಾಗದ ಕಾರಣ ಬೆಳೆ ವಿಮೆ ನಿರ್ಧಾರ ಕೂಡ ಮುಂದಕ್ಕೆ ಹೋಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಿಳಂಬದ ನೇರ ಪರಿಣಾಮ ಬ್ಯಾಂಕ್‌ಗಳ ಮೇಲಾಗುತ್ತಿದೆ. ಬರ ಪೀಡಿತ ತಾಲ್ಲೂಕಿನ ಜನರಿಗೆ ಸಾಲ ಮತ್ತಿತರರ ಸೌಲಭ್ಯಗಳನ್ನು ನೀಡಲು ಬ್ಯಾಂಕ್‌ಗಳಿಗೂ ಒಂದು ರೀತಿ ಕೈಕಟ್ಟಿ ಹಾಕಿದಂತಾಗಿದೆ.

ಬರಪೀಡಿತ ತಾಲ್ಲೂಕುಗಳ ಬೆಳೆ ಸಾಲವನ್ನು ಬ್ಯಾಂಕ್‌ಗಳು ವಸೂಲಿ ಮಾಡುವಂತಿಲ್ಲ. ಅಲ್ಲದೆ ಅಲ್ಪಾವಧಿ ಬೆಳೆ ಸಾಲವನ್ನು ದೀರ್ಘಾವಧಿ ಬೆಳೆ ಸಾಲವನ್ನಾಗಿ ಪರಿವರ್ತಿಸಿ ರೈತರಿಗೆ ಅನುಕೂಲ ಮಾಡಿಕೊಡುತ್ತವೆ. ಸಾಲ ಇದ್ದರೂ ಮತ್ತೆ ಸಾಲ ಹಾಗೂ ಅನುಭೋಗ ಸಾಲ ನೀಡಲು ಅವಕಾಶವಿದೆ. ಇಂಥ ಅವಕಾಶಗಳು ಬರಗಾಲ ಪೀಡಿತ ತಾಲ್ಲೂಕಿನ ರೈತರಿಗೆ ಸಿಗುವುದು ತಡವಾಗಲಿದೆ ಎಂಬುದು ಬ್ಯಾಂಕ್ ಅಧಿಕಾರಿಗಳ ವಿವರಣೆ.

ಎಸ್‌ಬಿಎಂ, ಎಸ್‌ಬಿಐ, ಕಾವೇರಿ ಕಲ್ಪತರು ಬ್ಯಾಂಕ್‌ಗಳು ನಿಧಾನಗತಿಯಲ್ಲಿ ಬೆಳೆ ಸಾಲವನ್ನು ಮಧ್ಯಮಾವಧಿ ಸಾಲವನ್ನಾಗಿ ಪರಿವರ್ತಿಸುವ ಕೆಲಸ ಆರಂಭಿಸಿವೆ. ಆದರೆ ಇದಕ್ಕೆ ತೀವ್ರಗತಿ ಬರಬೇಕಾದರೆ ಕಾನೂನಿನ ಬಲ ಬೇಕಾಗುತ್ತದೆ ಎನ್ನಲಾಗಿದೆ.

ಅಣೇವಾರಿ ಘೋಷಣೆಯಾಗದ ಹೊರತು ವಸೂಲಾಗದ ಸಾಲದ ಮೊತ್ತವನ್ನು ಪ್ರಕಟಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಹೊಸ ಸಾಲ ಕೊಡಲು ತಾಂತ್ರಿಕವಾಗಿ ಬ್ಯಾಂಕ್‌ಗಳಿಗೆ ಕಷ್ಟವಾಗುತ್ತದೆ. ಇನ್ನೊಂದೆಡೆ ಸಾಲ ವಸೂಲಾತಿಯ ಒತ್ತಡ ಕೂಡ ಹೆಚ್ಚುತ್ತದೆ. ಹೊಸ ಸಾಲ ಇರಲಿ, ಹಳೆ ಸಾಲದ ನವೀಕರಣ, ಅನುಭೋಗ ಸಾಲ ನೀಡುವುದು ಕೂಡ ಕಷ್ಟವಾಗುತ್ತಿದೆ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದರು.

ಈ ವರ್ಷ ಜಿಲ್ಲೆಯಲ್ಲಿ ಹೊಸದಾಗಿ 7 ಸಾವಿರ ರೈತರು ರೂ. 640 ಕೋಟಿ ಬೆಳೆ ಸಾಲ ಪಡೆದಿದ್ದರು. ಹಳೆಯ ಬೆಳೆ ಸಾಲದಲ್ಲಿ ರೂ. 574 ಕೋಟಿ  ಬ್ಯಾಂಕ್‌ಗಳಿಗೆ ಬಾಕಿ ಬರಬೇಕಾಗಿದೆ. ಹಳೆ ಸಾಲಗಾರರು, ಹೊಸ ಸಾಲಗಾರರು ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 1.12 ಲಕ್ಷ ರೈತರು ಬೆಳೆ ಸಾಲದ ಸೌಲಭ್ಯ ಪಡೆದಿದ್ದಾರೆ. ಇವರಲ್ಲಿ ಶೇ 60ರಷ್ಟು ರೈತರು ಬರಪೀಡಿತ ತಾಲ್ಲೂಕುಗಳ ವ್ಯಾಪ್ತಿಗೆ ಬರುತ್ತಾರೆ. ಆದರೂ ಸಾಲ ನವೀಕರಣ ಸೌಲಭ್ಯ ಈ ವರ್ಷದ ಸಾಲಗಾರರಿಗೆ ಮಾತ್ರ ಸಿಗಲಿದೆ. ಸಾಲ ತೀರಿಸದೆ ಬಾಕಿ ಉಳಿಸಿಕೊಂಡಿರುವ ಸಾಲಗಾರರಿಗೆ ದೊರೆಯುವುದಿಲ್ಲ. ಇದೂ ಕೂಡ ಬರಕ್ಕೆ ಸಿಲುಕಿರುವ ರೈತರ ಪಾಲಿನ ಮತ್ತೊಂದು ಸಂಕಷ್ಟವಾಗಿದೆ.

ಸಾಲ ನವೀಕರಿಸದಿದ್ದರೆ ಕಷ್ಟ
ಬೆಳೆ ಸಾಲವನ್ನು ರೈತರು ನವೀಕರಿಸಿಕೊಳ್ಳದಿದ್ದರೆ ಹೆಚ್ಚಿನ ಬಡ್ಡಿ ತೆರಬೇಕಾಗುತ್ತದೆ. ವಾಸ್ತವವಾಗಿ ಸರ್ಕಾರದ ಸಬ್ಸಿಡಿ ಕಾರಣ ಶೇ 6ರ ಬಡ್ಡಿ ದರದಲ್ಲಿ ಬೆಳೆ ಸಾಲವನ್ನು ಸಹಕಾರಿ ಬ್ಯಾಂಕ್‌ಗಳು ಸೇರಿದಂತೆ ವಾಣಿಜ್ಯ ಬ್ಯಾಂಕ್‌ಗಳು ನೀಡುತ್ತಿವೆ. ಆದರೆ ಇದು `ಪ್ರಾಮಾಣಿಕ ಸಾಲಗಾರ~ರಿಗೆ ಮಾತ್ರ ಅನ್ವಯವಾಗುತ್ತದೆ.

ಬೆಳೆ ಸಾಲ ತೀರಿಸಲು 6 ತಿಂಗಳ ಅಲ್ಪಾವಧಿ ನೀಡಲಾಗಿರುತ್ತದೆ. ಅಷ್ಟರಲ್ಲಿ ಸಾಲ ತೀರಿಸದಿದ್ದರೆ ಈ ಸಾಲಗಾರರು ಸುಸ್ತಿ ಬಡ್ಡಿಯೊಂದಿಗೆ ಶೇ 6ರ ಬಡ್ಡಿ ಸಾಲದ ಪ್ರಯೋಜನ ತನ್ನಿಂತಾನೆ ರದ್ದಾಗುತ್ತದೆ. ಸಾಲ ನವೀಕರಣಕ್ಕೆ ಸಾಲಗಾರರು ಬ್ಯಾಂಕ್‌ಗಳಿಗೆ ಅರ್ಜಿ ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.