ADVERTISEMENT

ಭಕ್ತಿ ಭಾಷೆ ಅರಿತ ಉದ್ಯಮಿ

ಅಯ್ಯಪ್ಪ ಸೇವಾ ಸಮಾಜಂ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್‌ಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 10:23 IST
Last Updated 31 ಡಿಸೆಂಬರ್ 2017, 10:23 IST
ತುಮಕೂರು ನಾಗರಿಕ ಸಮಿತಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಟಿ.ಬಿ.ಶೇಖರ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಎಸ್.ಜಿ.ಚಂದ್ರಮೌಳಿ, ಅಟವಿ ಶಿವಲಿಂಗ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಶೇಖರ್ ಅವರ ತಾಯಿ, ಪತ್ನಿ ಇದ್ದರು
ತುಮಕೂರು ನಾಗರಿಕ ಸಮಿತಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಟಿ.ಬಿ.ಶೇಖರ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಎಸ್.ಜಿ.ಚಂದ್ರಮೌಳಿ, ಅಟವಿ ಶಿವಲಿಂಗ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಶೇಖರ್ ಅವರ ತಾಯಿ, ಪತ್ನಿ ಇದ್ದರು   

ತುಮಕೂರು: ’ಉದ್ಯಮಿಯಾದರೂ ಜನಾನುರಾಗಿ, ಸದಾ ಸಮಾಜಮುಖಿ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಟಿ.ಬಿ.ಶೇಖರ್ ಅವರಿಗೆ ಭಕ್ತಿಯ ಭಾಷೆ ಗೊತ್ತಿದೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಹೇಳಿದರು.

ಶನಿವಾರ ತುಮಕೂರು ನಾಗರಿಕ ಸಮಿತಿಯು ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದರು.

‘ಶೇಖರ್ ಅವರು ಅಯ್ಯಪ್ಪ ಸೇವಾ ಸಮಾಜಂ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಶಬರಿಮಲೈಯಲ್ಲಿ ಭಕ್ತರಿಗೆ ಮೂಲಸೌಕರ್ಯಗಳನ್ನು ಹೆಚ್ಚಿನ ರೀತಿಯಲ್ಲಿ ಒದಗಿಸುವ ಕಾರ್ಯ ನಡೆದಿದೆ ಎಂದು ತಿಳಿದಿದೆ. ಮಲೆಯಾಳಿ, ತಮಿಳು ಭಾಷೆ ಬರುತ್ತೊ ಇಲ್ಲವೊ. ಆದರೆ ಅವರಿಗೆ ಭಕ್ತಿಯ ಭಾಷೆ ಗೊತ್ತಿದೆ. ಹೀಗಾಗಿ ಭಕ್ತರು ಇವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ’ಎಂದರು.

ADVERTISEMENT

’ಸಮಾಜದಲ್ಲಿದ್ದ ಮೇಲೆ ಸಮಾಜದ ಋಣ ತೀರಿಸಲೇಬೇಕು. ಆ ಕಾರ್ಯವನ್ನು ತಪ್ಪದೇ ನೆರವೇರಿಸಿಕೊಂಡು ಬಂದಿದ್ದಾರೆ. ಶಬರಿಮಲೈಯಲ್ಲಿ ಪ್ರತಿ ವರ್ಷ 5 ಕೋಟಿಗೂ ಹೆಚ್ಚು ಭಕ್ತರು ಸೇರುತ್ತಾರೆ. ಯಾರಿಗೂ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು, ಮೂಲಸೌಕರ್ಯ ಕಲ್ಪಿಸುವ ಹೊಣೆಗಾರಿಕೆ ಅತ್ಯಂತ ಜವಾಬ್ದಾರಿ ಕೆಲಸ. ಅದನ್ನು ಅಚ್ಚುಕಟ್ಟಾಗಿ ಶೇಖರ್ ಮಾಡಿಕೊಂಡು ಬರುತ್ತಿದ್ದಾರೆ’ ಎಂದು ತಿಳಿಸಿದರು.

ಸನ್ಮಾನಿತರಾಗಿ ಮಾತನಾಡಿದ ಟಿ.ಬಿ. ಶೇಖರ್, ‘1983ರಲ್ಲಿ ಶಬರಿಮಲೈಗೆ ಕುತೂಹಲಕ್ಕೆ ಹೋದವನು
ಭಕ್ತನಾಗಿ ಪರಿವರ್ತನೆಯಾದೆ. ನಾಸ್ತಿಕನಾದವನು ಆಸ್ತಿಕನಾದೆ’ ಎಂದು ನುಡಿದರು.

’ಸತತ 34 ವರ್ಷಗಳಿಂದ ಶಬರಿ ಮಲೈ ಯಾತ್ರೆ ಕೈಗೊಳ್ಳುತ್ತಿದ್ದೇನೆ. ಭಕ್ತರ ಸಹಕಾರದಲ್ಲಿ ನಗರದಲ್ಲೂ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಇದೆಲ್ಲವೂ ದೈವ ಸಂಕಲ್ಪದಿಂದಲೇ ಆಗಿರುವುದು. ಮನುಷ್ಯನ ಜೀವನದಲ್ಲಿ ಹಲವಾರು ರೀತಿ ತಿರುವುಗಳು ಬರುತ್ತವೆ. ಆದರೆ, ಕಾಯ, ವಾಚ, ಮನಸ್ಸಿನಿಂದ ಕಾರ್ಯನಿರ್ವಹಿಸಿದಾಗ ಸಮಾಜ ಗುರುತಿಸುತ್ತದೆ. ಜನಮುಖಿ ಕಾರ್ಯ ಮಾಡಿದ ಆತ್ಮತೃಪ್ತಿ ಸಿಗುತ್ತದೆ’ ಎಂದು ನುಡಿದರು.

‘ಸಂಯಮ, ಶಾಂತಿ ಗುಣ ನಮ್ಮ ತಾಯಿಯವರಿಂದ ಬಂದ ಗುಣಗಳು. ಪರಹಿತ, ಕಿರಿಯರ ಕಾಳಜಿ, ಅಸಹಾಯಕರಿಗೆ ನೆರವು ನೀಡುವಂತಹ ಸದ್ಗುಣಗಳನ್ನು ತಾಯಿಯವರೇ ಕಲಿಸಿದ್ದು’ ಎಂದು ನುಡಿದರು.

ಸಿದ್ಧಗಂಗಾಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಚಿಕ್ಕತೊಟ್ಲುಕೆರೆ ಅಟವಿ ಕ್ಷೇತ್ರದ ಅಟವಿ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.

ಶಬರಿ ಮಲೈ ಅಯ್ಯಪ್ಪ ಸೇವಾ ಸಮಾಜಂ ಗೌರವ ಅಧ್ಯಕ್ಷ ಎಸ್.ಶಿವರಾಂ, ಕಾರ್ಯದರ್ಶಿ ಈರೋಡ್ ಎನ್.ರಾಜನ್, ಶಬರಿ ಮಲೈ ಅಯ್ಯಪ್ಪ ಸೇವಾ ಸಮಾಜಂ ಅಧ್ಯಕ್ಷ ರೋಜಾ ಷಣ್ಮುಗಂ, ಪತ್ರಕರ್ತ ಎಸ್.ನಾಗಣ್ಣ ವೇದಿಕೆಯಲ್ಲಿದ್ದರು. ನಾಗರಿಕ ಸಮಿತಿ ಅಧ್ಯಕ್ಷ ಎಸ್.ಜಿ.ಚಂದ್ರಮೌಳಿ ಅಧ್ಯಕ್ಷತೆವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.