ADVERTISEMENT

ಮಧುಗಿರಿ: ಮರಳು ನೀತಿ ರದ್ಧತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 5:45 IST
Last Updated 24 ಮಾರ್ಚ್ 2011, 5:45 IST

ಮಧುಗಿರಿ: ರೈತ ವಿರೋಧಿಯಾಗಿರುವ ಅವೈಜ್ಞಾನಿಕ ಮರಳು ನೀತಿಯನ್ನು ಸರ್ಕಾರ ರದ್ದುಪಡಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಎಚ್ಚರಿಕೆ ನೀಡಿದರು.

ಸರ್ಕಾರದ ಮರಳು ನೀತಿಯನ್ವಯ ತಾಲ್ಲೂಕಿನಲ್ಲಿ ಮರಳು ನಿಕ್ಷೇಪ ತುಂಬಲು ಲೋಕೋಪಯೋಗಿ ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಟೆಂಡರ್ ಕರೆದಿರುವುದನ್ನು ವಿರೋಧಿಸಿ ಮಧುಗಿರಿ ತಾಲ್ಲೂಕು ನದಿಪಾತ್ರಗಳ ಮರಳು ರಕ್ಷಣಾ ಸಮಿತಿ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಬೃಹತ್ ಪ್ರತಭಟನಾ ಮೆರವಣಿಗೆ ನಂತರ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಜಮಾವಣೆಗೊಂಡ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಕುಡಿಯುವ ನೀರಿಗೂ ಜನತೆ ಸಂಕಷ್ಟ ಎದುರಿಸುತ್ತಿದ್ದು, ಅಂತರ್ಜಲ ಕುಸಿತದಿಂದ ಪ್ಲೋರೈಡ್ ನೀರು ಸೇವನೆಯಿಂದ ಜನತೆ ಹಲವು ರೋಗಗಳಿಗೆ ತುತ್ತಾಗುತ್ತಿದೆ. ಇಂಥ ಸಂದರ್ಭದಲ್ಲಿ ಮರಳು ಮಾಫಿಯಾಗೆ ಮಣಿದು ಸರ್ಕಾರ ಟೆಂಡರ್ ಕರೆದಿದೆ ಎಂದು ಕೆಎನ್‌ಆರ್ ಆರೋಪಿಸಿದರು.

ಕಾಂಗ್ರೆಸ್ ಮುಖಂಡ ತುಂಗೋಟಿ ರಾಮಣ್ಣ ಮಾತನಾಡಿ, ಜನರ ಭಾವನೆ ಅರ್ಥ ಮಾಡಿಕೊಳ್ಳದೆ ಸರ್ಕಾರ ಹರಾಜು ಮಾಡಿ ಮರಳು ತುಂಬಿಸಲು ಮುಂದಾದರೆ ಲಾರಿಗಳನ್ನು ತಡೆದು ಚಕ್ರದ ಗಾಳಿ ತೆಗೆದು ನಿಲ್ಲಿಸಿ ಕಾನೂನು ಕೈಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತಲಾ ರಾಜಣ್ಣ, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆಂಚಮಾರಯ್ಯ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಪುರಸಭಾ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಸದಸ್ಯ ಎಂ.ಎಲ್.ಗಂಗರಾಜು, ತಾ.ಪಂ.ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷ ಜಯದೇವ್, ನ್ಯಾಯವಾದಿ ಪಂಚಾಕ್ಷರಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ, ರಾಜ್‌ಗೋಪಾಲ್, ಕನ್ನಡ ಸೇನೆ ಅಧ್ಯಕ್ಷ ಭಾಸ್ಕರ್, ಜಿ.ಪಂ.ಮಾಜಿ ಸದಸ್ಯ ಎಸ್.ಡಿ.ಕೃಷ್ಣಪ್ಪ ಮತ್ತಿತರರು ಭಾಗವಹಿಸಿದ್ದರು.

ದಹನ: ತಾಲ್ಲೂಕಿನಲ್ಲಿ ಮರಳು ಗಣಿಗಾರಿಕೆ ನಡೆಸುವ ಸಲುವಾಗಿ ಪರವಾನಗಿ ನೀಡಲು ಸರ್ಕಾರ ಆದೇಶ ಹೊರಡಿಸಿರುವ ಗೆಜೆಟ್ ಪ್ರತಿಗಳನ್ನು ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾಕಾರರು ಸುಟ್ಟು ಹಾಕಿದರು. ನಂತರ ಈ ಕುರಿತು ರಾಜ್ಯದ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಬರೆದಿರುವ ಮನವಿ ಪತ್ರವನ್ನು ಉಪವಿಭಾಗಾಧಿಕಾರಿ ದೀಪ್ತಿ ಅವರಿಗೆ ಕೆ.ಎನ್.ರಾಜಣ್ಣ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.