ADVERTISEMENT

ಮಧ್ಯಾಹ್ನವಾದರೂ ಬಾರದ ವೈದ್ಯರು!

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 10:11 IST
Last Updated 19 ಜುಲೈ 2013, 10:11 IST

ಕುಣಿಗಲ್: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಧ್ಯಾಹ್ನ ಕಳೆದರೂ ಬಹುತೇಕ ವೈದ್ಯರು ಕರ್ತವ್ಯಕ್ಕೆ ಹಾಜರಾಗದ ಕಾರಣ ರೋಗಿಗಳು ಪರದಾಡಿದ ಘಟನೆ ಗುರುವಾರ ನಡೆದಿದೆ.

ಸಾರ್ವಜನಿಕ ಆಸ್ಪತ್ರೆಗೆ ಬೆಳಗ್ಗೆ 9ಗಂಟೆಗೆ ತಾಲ್ಲೂಕಿನ ವಿವಿಧೆಡೆಯಿಂದ ಅಪಾರ ಸಂಖ್ಯೆಯ ರೋಗಿಗಳು ಚಿಕಿತ್ಸೆಗಾಗಿ ಆಗಮಿಸಿದ್ದರು. ಮಕ್ಕಳ ವೈದ್ಯರನ್ನು ಹೊರತುಪಡಿಸಿದರೆ ಬೇರೆ ಯಾವ ವೈದ್ಯರು ಸಕಾಲಕ್ಕೆ ಆಗಮಿಸಿ ರೋಗಿಗಳ ತಪಾಸಣೆ ನಡೆಸಲಿಲ್ಲ. ಕಾದು ರೋಸಿದ ರೋಗಿಗಳು, ಸಂಬಂಧಿಕರು ಮಕ್ಕಳ ವೈದ್ಯರ ಬಳಿಯೇ ತೋರಿಸಲು ಮುಗಿಬಿದ್ದರು. ಇದರಿಂದ ಕಂಗಾಲಾದ ವೈದ್ಯ ತಾವು ಕೇವಲ ಮಕ್ಕಳನ್ನು ಮಾತ್ರ ಪರೀಕ್ಷಿಸುವುದಾಗಿ ಸ್ಪಷ್ಟಪಡಿಸಿದರು. ಇದರಿಂದ ಅಸಮಾಧಾನಗೊಂಡ ಜನತೆ ವೈದ್ಯರ ಕಾರ್ಯ ವೈಖರಿ ವಿರುದ್ಧ ಕಿಡಿಕಾರಿದರು.

ಸುದ್ದಿ ತಿಳಿದು ಆಸ್ಪತ್ರೆಗೆ ಬಂದ ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ್ ವೈದ್ಯರ ಅನಧಿಕೃತ ಗೈರು ಹಾಜರಿಗೆ ಆಕ್ರೋಶ ವ್ಯಕ್ತಪಡಿಸಿದರು. ಹಾಜರಿ ಪುಸ್ತಕದಲ್ಲಿ ಎಂಟು ಮಂದಿ ವೈದ್ಯರು ಸಹಿ ಹಾಕಿದ್ದಾರೆ. ಆದರೆ ಮಹಿಳಾ ವೈದ್ಯರು ಶಶ್ತ್ರಚಿಕಿತ್ಸೆಯಲ್ಲಿ ನಿರತರಾದರೆ; ಮಕ್ಕಳ ವೈದ್ಯರು ಮಾತ್ರ ಕರ್ತವ್ಯದಲ್ಲಿರುವುದು ಕಂಡು ಬಂತು. ಉಳಿದ ಆರು ವೈದ್ಯರನ್ನು ಆಸ್ಪತ್ರೆಯಲ್ಲಿ ಹುಡುಕಿದರು ಸಿಗಲಿಲ್ಲ. ಈ ಬಗ್ಗೆ ಆಸ್ಪತ್ರೆ ಆಡಳಿತಾಧಿಕಾರಿ ಗಣೇಶ್‌ಬಾಬು ಅವರನ್ನು ಸಂಪರ್ಕಿಸಿ ಪ್ರಶ್ನಿಸಿದಾಗ ಪ್ರಕರಣವೊಂದರ ವಿಚಾರಣೆಗೆ ದಾವಣಗೆರೆಗೆ ತೆರಳಿದ್ದು, ಹಿಂತಿರುಗುತ್ತಿರುವುದಾಗಿ ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಸಕಾಲಕ್ಕೆ ವೈದ್ಯರು ಆಗಮಿಸದಿರುವ ಬಗ್ಗೆ ಆಡಳಿತ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಕೂಡಲೇ ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು. ಇದೇ ಪರಿಸ್ಥಿತಿ ಮುಂದುವರೆದಿದ್ದೇ ಆದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.