ADVERTISEMENT

ಮನೆ, ಮದುವೆಯಲ್ಲಿ ಕಾಲ ಕಳೆದ ಅಭ್ಯರ್ಥಿಗಳು

ಮತದಾನ ಒತ್ತಡದಿಂದ ಮುಕ್ತರಾಗಿ ಗೆಲುವಿನ ಲೆಕ್ಕಾಚಾರದಲ್ಲಿಯೇ ದಿನ ದೂಡಿದ ಅ‌ಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 14 ಮೇ 2018, 8:54 IST
Last Updated 14 ಮೇ 2018, 8:54 IST

ತುಮಕೂರು: ಶನಿವಾರ ಸಂಜೆ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಅಭ್ಯರ್ಥಿಗಳು ನಿರಾಳರಾದರು. ಭಾನುವಾರ ಬೆಳಿಗ್ಗೆ ಬಹುತೇಕ ಅಭ್ಯರ್ಥಿಗಳು ನಿರಾಳವಾಗಿಯೇ ಇದ್ದರು. ಪತ್ರಿಕೆ, ಸುದ್ದಿವಾಹಿನಿಗಳಲ್ಲಿನ ಚುನಾವಣಾ ಸಮೀಕ್ಷೆ ಗಮನಿಸುವಲ್ಲಿ ಕೆಲವರು ಮಗ್ನರಾಗಿದ್ದರು.

ತುಮಕೂರು ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ರಫೀಕ್ ಅಹಮದ್ ಅವರು ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಮನೆಯಲ್ಲಿ ಕಾಲ ಕಳೆದರು. ಚುನಾವಣೆ ಒತ್ತಡದಿಂದ ಮುಕ್ತರಾಗಿ ಸಂಡೇ ಮೂಡ್‌ನಲ್ಲಿ ಕಾಲ ಕಳೆದರು.

ಬೆಂಬಲಿಗರು, ಪಕ್ಷದ ಮುಖಂಡರು, ಕಾರ್ಯಕರ್ತರು ಶಾಸಕರ ಮನೆಗೇ ಬಂದು ಶನಿವಾರ ತಮ್ಮ ಪ್ರದೇಶದಲ್ಲಿ ನಡೆದ ಮತದಾನ ಪ್ರಮಾಣದ ಬಗ್ಗೆ ವಿವರಿಸಿದರು. ರಾಜಕೀಯ ಲೆಕ್ಕಾಚಾರದ ಬಗ್ಗೆ ಚರ್ಚೆ ನಡೆಸಿದರು.

ADVERTISEMENT

ಶಾಸಕರ ಮಾವ ಹಾಗೂ ಕಾಂಗ್ರೆಸ್ ಮುಖಂಡರಾದ ಷಫೀ ಅಹಮದ್ ಅವರೂ ರಫೀಕ್ ಅವರ ಮನೆಗೆ ಬಂದು ಮೇ 15ರಂದು ಬರಲಿರುವ ಫಲಿತಾಂಶದ ಬಗ್ಗೆ ಲೆಕ್ಕಾಚಾರ ಹಾಕಿದರು.

ತಗ್ಗಿದ ಮತದಾನಕ್ಕೆ ಬೇಸರ: ‘ಮತದಾನದ ಬಳಿಕ ಸ್ವಲ್ಪ ಒತ್ತಡ ಕಡಿಮೆಯಾಗಿದೆ. ಮತದಾನ ನಗರದ ಎಲ್ಲ ಕಡೆಶಾಂತಿಯುತವಾಗಿ ನಡೆದಿದ್ದು ಸಂತೋಷವಾಗಿದೆ. ಆದರೆ, ಕಳೆದ ಬಾರಿಗಿಂತ ಕಡಿಮೆ ಮತದಾನ ಆಗಿರುವುದು ಬೇಸರವನ್ನುಂಟು ಮಾಡಿದೆ’ ಎಂದು ಪ್ರಜಾವಾಣಿಗೆ ತಿಳಿಸಿದರು.

ಮದುವೆಗೆ ಹಾಜರ್!

ತುಮಕೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಹಾಗೂ ಶಾಸಕ ಬಿ.ಸುರೇಶ್‌ಗೌಡ ಅಬರು ಮತದಾನ ಮರುದಿನ ಭಾನುವಾರ ಕ್ಷೇತ್ರದಲ್ಲಿಯೇ ಕಾಲ ಕಳೆದರು.

ನಂದಿಹಳ್ಳಿ, ದಾಸರಹಳ್ಳಿ, ಬೆಳ್ಳಾವಿ ಸೇರಿದಂತೆ 8 ಕಡೆ ಮದುವೆ ಸಮಾರಂಭಗಳಲ್ಲಿ ಪಾಲ್ಗೊಂಡು ವಧುವರರಿಗೆ ಶುಭ ಕೋರಿದರು. ಅಲ್ಲದೇ, ತಮಗೆ ಮತ ಹಾಕಿಸಲು ಶ್ರಮಿಸಿದ ಕ್ಷೇತ್ರದ ಮುಖಂಡರು, ಕಾರ್ಯಕರ್ತರು, ಗ್ರಾಮದ ಮುಖಂಡರ ಮನೆಗಳಿಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದರು. ಕಾಫಿ, ಉಪಾಹಾರ ಸೇವಿಸಿ ರಾಜಕೀಯ ಲೆಕ್ಕಾಚಾರ ನಡೆಸಿದರು.

ಅಲ್ಲದೇ, ಪಕ್ಷದ ಇಬ್ಬರು ಕಾರ್ಯಕರ್ತರ ತಂದೆಯವರು ಮೃತಪಟ್ಟಿದ್ದರಿಂದ ಅಲ್ಲಿಗೂ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಮತದಾನ ಪ್ರಮಾಣ ಹೆಚ್ಚಳಕ್ಕೆ ಸಂತಸ: ‘ರಾಜಕೀಯ ಎಂಬುದು ಇದ್ದೇ ಇರುತ್ತೆ. ಆದರೆ, ಮತದಾರರು ಮತದಾನಕ್ಕೆ ಉತ್ಸಾಹ ತೋರಿದ್ದು ತುಂಬಾ ಸಂತೋಷವಾಗಿದೆ’ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ತುಮಕೂರು ಗ್ರಾಮಾಂತರದಲ್ಲಿ ಶೇ 85.5 ಮತದಾನ ಆಗಿರುವುದು ಖುಷಿಯಾಗಿದೆ. ಮತವನ್ನು ಯಾವುದೇ ಅಭ್ಯರ್ಥಿಗೆ ಹಾಕಲಿ. ಅದು ಬೇರೆ ವಿಚಾರ. ಆದರೆ, ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರಲ್ಲ ಅದು ಪ್ರಶಂಸನೀಯ’ ಎಂದು ಹೇಳಿದರು.

ತುಮಕೂರು ನಗರ ವಿಧಾನಸಭಾ ಕ್ಷೇತ್ರದವ ಬಿಜೆಪಿ ಅಭ್ಯರ್ಥಿ ಜಿ.ಬಿ.ಜ್ಯೋತಿ ಗಣೇಶ್ ಅವರು ಭಾನುವಾರ ಮನೆಯಲ್ಲಿಯೇ ವಿಶ್ರಾಂತಿ ಪಡೆದು ಕಾಲ ಕಳೆದರು.‌ ಮೊಬೈಲ್‌ನಲ್ಲಿ ಮತದಾನದ ಲೆಕ್ಕಾಚಾರಗಳ ಬಗ್ಗೆ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿದರು.

ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜ್ ಅವರೂ ಬೆಳಿಗ್ಗೆ ಯಿಂದ ಮನೆಯಲ್ಲಿ ಕಾಲ ಕಳೆದರು. ಸಂಜೆ ಮನೆಯಿಂದ ಹೊರಬಿದ್ದ ಅವರು ಸ್ನೇಹಿತರು ಮತ್ತು ಬೆಂಬಲಿಗರೊಂದಿಗೆ ತಮಗೆ ಲಭಿಸಬಹುದಾದ ಮತಗಳ ಬಗ್ಗೆ ಚರ್ಚೆ ನಡೆಸಿದರು.

ವಿಶ್ರಾಂತಿ ಪಡೆದ ಅಭ್ಯರ್ಥಿಗಳು

ಪಾವಗಡ: ಚುನಾವಣೆ ಮುಗಿದ ನಂತರ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಭಾನುವಾರ ಆಪ್ತರು, ಕಾರ್ಯಕರ್ತರೊಂದಿಗೆ ಚರ್ಚೆಯಲ್ಲಿ ತೊಡಗಿದ್ದರು.

ಜೆಡಿಎಸ್ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ ಸ್ವಗ್ರಾಮ ಕೆ.ಟಿ.ಹಳ್ಳಿ ಮನೆಯಲ್ಲಿ ಕಾರ್ಯಕರ್ತರೊಂದಿಗೆ ಚುನಾವಣೆ ಕುರಿತು ಸಮಾಲೋಚನೆ ನಡೆಸಿದರು. ಕೆಲಕಾಲ ಕುಟುಂಬ ಸದಸ್ಯರೊಡನೆ ವಿಶ್ರಾಂತಿ ಪಡೆದರು.

ಕಾಂಗ್ರೆಸ್ ಅಭ್ಯರ್ಥಿ ವೆಂಕಟರವಣಪ್ಪ ಹನುಮಂತನಹಳ್ಳಿ ತೋಟದ ಮನೆಯಲ್ಲಿ ಬೆಳಿಗ್ಗೆಯಿಂದಲೇ ವಿಶ್ರಾಂತಿ ಪಡೆದರು. ನಂತರ ಮುಖಂಡರೊಂದಿಗೆ ಚುನಾವಣೆ ಬಗ್ಗೆ ಚರ್ಚೆ ನಡೆಸಿದರು.

ಬಿಜೆಪಿ ಅಭ್ಯರ್ಥಿ ಜಿ.ವಿ.ಬಲರಾಂ ಅವರು ಗುಜ್ಜನಡು ಗ್ರಾಮದ ಮನೆಯಲ್ಲಿ ಕುಟುಂಬ ಸದಸ್ಯರೊಡನೆ ಕಾಲ ಕಳೆದರು. ಪಕ್ಷದ ಪ್ರಮುಖರೊಂದಿಗೆ ಕೆಲಕಾಲ ಮಾತುಕಥೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.