ADVERTISEMENT

ಮರುಭೂಮಿಯತ್ತ ರಾಜ್ಯ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 9:01 IST
Last Updated 10 ಡಿಸೆಂಬರ್ 2013, 9:01 IST

ತುಮಕೂರು: ದೇಶದಲ್ಲಿ ರಾಜ್ಯ ಎರಡನೇ ದೊಡ್ಡ ಮರುಭೂಮಿಯಾಗಿ ಮಾರ್ಪಡುತ್ತಿದೆ. ಗುಲ್ಬರ್ಗಾ, ಬಳ್ಳಾರಿ, ರಾಯಚೂರು, ಬೀದರ್‌ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಮುಂದಿನ ನಾಲ್ಕೈದು ವರ್ಷಗಳಲ್ಲಿ ಮರುಭೂಮಿ­ಯಾಗಿ ಪರಿಣಮಿಸಲಿವೆ ಎಂದು ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ ಆತಂಕ ವ್ಯಕ್ತಪಡಿಸಿದರು.

ಮಹೇಶ್‌ ಪದವಿ ಪೂರ್ವ ಕಾಲೇಜು ಸೋಮವಾರ ಹಮ್ಮಿ­ಕೊಂಡಿದ್ದ ಪ್ರಥಮ ವರ್ಷಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಮೂಲಧಾತುಗಳ ಅನ್ವೇಷಣೆ ನೆಪದಲ್ಲಿ ಪರಿಸರ ಶೋಷಣೆ ಮಾಡ­ಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ, ಬದಲಾಗದ ಜೀವನ ಶೈಲಿಯಿಂದಾಗಿ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಇದರಿಂದ ವಾತಾವರಣ, ಋತುಮಾನ ಬದಲಾವಣೆ ಆಗುತ್ತಿದೆ. ಜಾಗತಿಕ ತಾಪಮಾನ ಎಂಬ ವಿಪತ್ತಿನಿಂದ ಭೂಮಿಯನ್ನು ಪಾರು ಮಾಡಲು ಹಸಿರು ಆರ್ಥಿಕತೆಯನ್ನು ಎಲ್ಲ ದೇಶಗಳೂ ದೇಶವೂ ರೂಢಿಸಿ­ಕೊಳ್ಳಬೇಕಿದೆ ಎಂದರು.

ಎಲ್ಲಾ ನೈಸರ್ಗಿಕ ಪ್ರಕೋಪಗಳಿಗೆ ಮನುಷ್ಯನೇ ಹೊಣೆ ಎಂದು ಹೇಳಿದರು. ಸಂಶೋಧನೆಯಲ್ಲಿ ಭಾರತ ಶತಮಾನಗಳಷ್ಟು ಹಿಂದೆ ಉಳಿದಿದೆ. ಅಗತ್ಯ ಶಿಕ್ಷಣ, ವೈಜ್ಞಾನಿಕ ದೃಷ್ಟಿ­ಕೋನದ ಕೊರತೆ ಇದಕ್ಕೆ ಕಾರಣ­ವಾಗಿದೆ.

ಸುತ್ತಮುತ್ತ ನಡೆಯುವ ವಿದ್ಯಮಾನಗಳನ್ನು ಕಣ್ತೆರೆದು ನೀಡುವ ದೃಷ್ಟಿಕೋನವನ್ನು ಎಲ್ಲರೂ ಬೆಳೆಸಿ­ಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವವಿದ್ಯಾಲಯ ಕುಲ­ಪತಿ ಪ್ರೊ.ಎ.ಎಚ್‌.ರಾಜಾಸಾಬ್‌ ಮಾತ­ನಾಡಿ, ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಕ್ಲಿಷ್ಟಕರ ಹಂತ. ವಯಸ್ಕತೆ, ಸಮಾಜವನ್ನು ಅರ್ಥ­ಮಾಡಿ­ಕೊಳ್ಳು­ವುದು, ಪೋಷಕರ ಮನೋಕಲ್ಪನೆ ಈಡೇರಿಸುವ ಒತ್ತಡ ಹಾಗೂ ಒಳ್ಳೆಯ ಶಿಕ್ಷಣದಿಂದ ಜೀವನ ರೂಪಿಸಿಕೊಳ್ಳುವ ಕಾಲಘಟ್ಟವಾಗಿದೆ.

ಹಾಗಾಗಿ ಅಂಕ ಆಧಾರಿತ ವ್ಯಾಸಂಗಕ್ಕೆ ಆದ್ಯತೆ ನೀಡದೇ ಜೀವನ ಉದ್ದೇಶ ಗುರುತಿಸಿ­ಕೊಳ್ಳ­ಬೇಕು. ಇಂದಿನ ಸ್ಪರ್ಧಾತ್ಮಕ ಯುಗ­ದಲ್ಲಿ ಸಾಕಷ್ಟು ಸೌಲಭ್ಯಗಳು, ಉದ್ಯೋಗ ಅವಕಾಶಗಳಿವೆ ಎಂದು ಹೇಳಿದರು.

ಎಂಜಿನಿಯರಿಂಗ್‌ಗಿಂತ ಹೆಚ್ಚು ಮೂಲವಿಜ್ಞಾನಕ್ಕೆ ಉತ್ತಮ ವ್ಯಾಪ್ತಿ ಸಿಗುತ್ತಿದೆ. ಯಾವುದೇ ಅನ್ವೇಷಣೆ ಜನಜೀವನಕ್ಕೆ ಹತ್ತಿರವಾದಾಗ ಮಾತ್ರ ಅದಕ್ಕೆ ಬೆಲೆ ಬರುತ್ತದೆ. ಇಲ್ಲವಾದಲ್ಲಿ ಅದು ಸಂಶೋಧನೆಯೇ ಅಲ್ಲ ಎಂದು ತಿಳಿಸಿದರು.

ತುಮಕೂರು ವಿ.ವಿ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ.ನಿತ್ಯಾನಂದ ಶೆಟ್ಟಿ, ಮಹೇಶ್‌ ಪಿಯು ಕಾಲೇಜು ಪ್ರಾಂಶುಪಾಲ ಸತೀಶ್‌, ಆಡಳಿತಾಧಿಕಾರಿ ರಾಜಶೇಖರ­ಮೂರ್ತಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.