ADVERTISEMENT

ಮಳೆಹಾನಿ ವರದಿ ನೀಡಲು ಡಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2011, 6:50 IST
Last Updated 6 ಜನವರಿ 2011, 6:50 IST

ತುಮಕೂರು: ಜಿಲ್ಲೆಯಲ್ಲಿ ಇತ್ತೀಚೆಗೆ  ಸುರಿದ ಭಾರಿ ಮಳೆಯಿಂದ ಉಂಟಾದ ಮನೆ, ಬೆಳೆ, ಜೀವಹಾನಿ, ಜಾನುವಾರು ಹಾನಿ ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರದ ತಂಡವೊಂದು ಜ. 11ರಂದು ಜಿಲ್ಲೆಗೆ ಆಗಮಿಸಲಿದ್ದು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾನಿ ವಿವರ ಕ್ರೋಡೀಕರಿಸಿ ಕೇಂದ್ರ ತಂಡಕ್ಕೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಳೆ ಹಾನಿ ಕುರಿತು ಕೇಂದ್ರ ತಂಡಕ್ಕೆ ವರದಿ ನೀಡುವ ಸಂಬಂಧ ಬುಧವಾರ ಕರೆದಿದ್ದ ಸಭೆಯಲ್ಲಿ ಮಾತನಾಡಿ, ಲೋಕೋಪಯೋಗಿ, ಬಂದರು, ಒಳನಾಡು ಜಲಸಾರಿಗೆ ಇಲಾಖೆ ವ್ಯಾಪ್ತಿಗೆ ಬರುವ 169 ರಸ್ತೆಗಳು, 82 ಸೇತುವೆಗಳು, 20 ಕಟ್ಟಡಗಳು ಹಾನಿಗೊಳಗಾಗಿವೆ. ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗ, ತುಮಕೂರು, ಮಧುಗಿರಿ ವ್ಯಾಪ್ತಿಗೆ ಬರುವ 105 ರಸ್ತೆಗಳು 27 ಸೇತುವೆಗಳು, 5 ಕಟ್ಟಡಗಳಿಗೆ ಹಾನಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸಮಗ್ರ ಮಾಹಿತಿ ಸಿದ್ಧಪಡಿಸಬೇಕು ಎಂದು ಅವರು ಸೂಚಿಸಿದರು.

ಸಣ್ಣ ನೀರಾವರಿ ವಿಭಾಗದ 46 ಕೆರೆಗಳ ದುರಸ್ತಿ, ಶಾಲಾ ಮತ್ತು ವಿದ್ಯಾರ್ಥಿ ನಿಲಯ ದುರಸ್ತಿ, ಅಂಗನವಾಡಿ ಕಟ್ಟಡ ದುರಸ್ತಿ, ಆರೋಗ್ಯ ಇಲಾಖೆ ಕಟ್ಟಡಗಳ ದುರಸ್ತಿಗಾಗಿ ಬೇಕಿರುವ ಅನುದಾನಕ್ಕೆ ಸಂಬಂಧಿಸಿದಂತೆ ಕೇಂದ್ರ ತಂಡಕ್ಕೆ ನೀಡಲು ಕಾರ್ಯಯೋಜನೆ ಸಿದ್ಧಪಡಿಸಲು ತಿಳಿಸಿದರು.

ಪ್ರಕೃತಿ ವಿಕೋಪದಿಂದ ಉಂಟಾದ ಪ್ರಾಣಹಾನಿ, ಜಾನುವಾರು ಹಾನಿ, ಬೆಳೆ ಹಾನಿಗೆ ಪರಿಹಾರ ನೀಡಲು ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗೆ ರೂ. 20 ಲಕ್ಷ ಬಿಡುಗಡೆ ಮಾಡಲಾಗಿದೆ. ಉಳಿದ ರೂ. 80 ಲಕ್ಷದಲ್ಲಿ ಪ್ರತಿ ತಾಲ್ಲೂಕಿಗೆ ರೂ. 8 ಲಕ್ಷದಂತೆ ಭಾರಿ ಮಳೆಯಿಂದ ರಸ್ತೆ, ಸೇತುವೆ, ಕಟ್ಟಡ ದುರಸ್ತಿಪಡಿಸಲು ಹಂಚಿಕೆ ಮಾಡಲಾಗಿದೆ. ಹೆಚ್ಚಿನ ಅನುದಾನಕ್ಕಾಗಿ ಕೇಂದ್ರ ತಂಡಕ್ಕೂ ಪ್ರಸ್ತಾವನೆ ಸಿದ್ಧಪಡಿಸಬೇಕು ಎಂದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ದೊಡ್ಡಪ್ಪ, ಮಧುಗಿರಿ ಉಪವಿಭಾಗಾಧಿಕಾರಿ ಅನುರಾಗ್ ತಿವಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.