ADVERTISEMENT

ಮಾನವೀಯತೆಯ ಬದುಕೇ ನಿಜವಾದ ಜೀವನ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 6:05 IST
Last Updated 26 ಡಿಸೆಂಬರ್ 2017, 6:05 IST

ತುಮಕೂರು: ‘ನಾನು ಮತ್ತು ನಾವೇ ಎಂಬ ಅಹಂಕಾರ ಬಿಟ್ಟು, ನಾವು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಪರೋಪಕಾರ, ಪರಹಿತ ಗುಣಗಳನ್ನು ಅಳವಡಿಸಿಕೊಂಡು ಮಾನವೀಯತೆಯಿಂದ ಬದುಕುವುದೇ ನಿಜವಾದ ಜೀವನ’ ಎಂದು  ನಿವೃತ್ತ ಪ್ರಾಂಶುಪಾಲ ಎಚ್.ವಿ.ಶಂಕರನಾರಾಯಣ ಹೇಳಿದರು.

ಸೋಮವಾರ ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘ ಆಯೋಜಿಸಿದ್ದ ‘ಹೊಯ್ಸಳ ಹಬ್ಬ’ 8ನೇ ವಾರ್ಷಿಕೋತ್ಸವ ಮತ್ತು ಸಮಾಜ ಬಾಂಧವರ ಸಮಾವೇಶ ಹಾಗೂ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು.

‘ನಾನು ಎಂಬುದು ಜ್ಞಾನ ಸಾಧನೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಇಟ್ಟುಕೊಳ್ಳಬೇಕು.ಅಹಂಕಾರವಾಗಿ ಪರಿವರ್ತನೆಯಾಗಬಾರದು. ಅಹಂಕಾರ ಬಿಟ್ಟರೆ ಮಾತ್ರ ಆತ್ಮದ ಅರಿವು ಆಗಲು ಸಾಧ್ಯ. ಹೊಯ್ಸಳ ಕರ್ನಾಟಕದವರು ನಾವು ಎಂಬ ನೆಲೆಗಟ್ಟಿನಲ್ಲಿ ಸಂಘಟಿತರಾಗಬೇಕು. ಬೇರೆ ಸಮುದಾಯದವರನ್ನೂ ಸಮಾನವಾಗಿ ಕಾಣಬೇಕು’ ಎಂದು ತಿಳಿಸಿದರು.

ADVERTISEMENT

ಮುಖ್ಯ ಅತಿಥಿ ಎಸ್.ವಿ.ವೆಂಕಟರಾಮಯ್ಯ ಮಾತನಾಡಿ,‘ ಹೊಯ್ಸಳ ಕರ್ನಾಟಕ ಎಂಬುದು ಬ್ರಾಹ್ಮರ ಒಂದು ಪ್ರಬೇಧ. ಇವರು ಕರ್ನಾಟಕದ ಮೂಲನಿವಾಸಿಗಳು. ಇದೇ ಮಣ್ಣಿನ ಮಕ್ಕಳಾಗಿದ್ದಾರೆ’ ಎಂದರು.

‘ಶಾಸ್ತ್ರಗಳು ಹೇಳುವ ಪ್ರಕಾರ ಬ್ರಾಹ್ಮಣರ ಆದ್ಯ ಕರ್ತವ್ಯ ವೇದ ಚಿಂತನೆ. ವೇದ ಚಿಂತನೆ ಎಂದರೆ ವ್ಯಕ್ತಿತ್ವ ನಿರ್ಮಾಣ ಮಾಡುವುದು. ಸಮಾಜ, ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಬೇಕು. ಈ ದೇಶದಲ್ಲಿ ನಮ್ಮ ಸಮಾಜ ನಾಶವಾಗದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

ಚಲನಚಿತ್ರ ನಿರ್ದೇಶಕ ಸಿ.ವಿ.ಶಿವಶಂಕರ್ ಮಾತನಾಡಿ,‘ ಬ್ರಾಹ್ಮಣ ಎಂದರೆ ಬ್ರಹ್ಮಜ್ಞಾನ ಸಂಪಾದನೆಯ ಮೂಲಧ್ಯೇಯ ಎಂದರ್ಥ. ಬ್ರಹ್ಮಜ್ಞಾನ ಎಂಬುದು ಕಾಸು ಕೊಟ್ಟು ಸಂಪಾದನೆ ಮಾಡುವಂತಹುದಲ್ಲ. ಈ ಜ್ಞಾನ ಸಂಪಾದಿಸಿ ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಉಪಕಾರವೇ ಪುಣ್ಯ, ಅಪಕಾರವೇ ಪಾಪ ಎಂಬ ಸತ್ಯವನ್ನು ಅರಿತು ನಡೆಯಬೇಕು. ನಾಡು, ನುಡಿ, ಅಭಿಮಾನ ಉಳಿಸಿ ಬೆಳೆಸಬೇಕು ಎಂದು ಹೇಳಿದರು. ಯುವ ಗಾಯಕರಾದ ಮೈಸೂರಿನ ಎಂ.ಆರ್. ಶ್ರೀಹರ್ಷ ಮಾತನಾಡಿ,‘  ಕಲೆ, ಸಂಸ್ಕೃತಿ, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಗೀತ ಸೇರಿದಂತೆ ಲಲಿತ ಕಲೆ ಬೆಳೆಯಲು ಪ್ರೋತ್ಸಾಹಿಸಬೇಕು. ಓದಿನ ಜೊತೆಗೆ ಕಲಾಭಿರುಚಿ ಇದ್ದರೆ ವ್ಯಕ್ತಿತ್ವ ನಿರ್ಮಾಣಕ್ಕೆ ಬಹಳಷ್ಟು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.

ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎನ್.ಆರ್. ನಾಗರಾಜರಾವ್ ಮಾತನಾಡಿದರು. ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಎನ್.ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಗೀತಾ ನಾಗೇಶ್, ಬಾಲ ಕಲಾವಿದೆ ಅನಘ ಪ್ರಸಾದ್ ವೇದಿಕೆಯಲ್ಲಿದ್ದರು. ಸಿ.ವಿ.ಶಿವಶಂಕರ್, ಲಕ್ಷ್ಮಿ ಚಂದ್ರಶೇಖರ್, ಪತ್ರಕರ್ತೆ ಸುಶೀಲಾ ಸುಬ್ರಹ್ಮಣ್ಯ ಅವರನ್ನು ಸನ್ಮಾನಿಸಲಾಯಿತು. ಸತ್ಯನಾರಾಯಣ ಹೆಬ್ಬೂರು ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಕೆ.ಹಿರಿಯಣ್ಣ ಪ್ರಾಸ್ತಾವಿಕ ಮಾತನಾಡಿದರು. ರಮ್ಯಾ ವಿ.ಕಲ್ಲೂರು ನಿರೂಪಿಸಿದರು. ಎಚ್.ಎಸ್.ರಾಘವೇಂದ್ರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.