ADVERTISEMENT

ಮಾಹಿತಿ ನೀಡದ ತುಮಕೂರು ವಿಶ್ವವಿದ್ಯಾಲಯ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2011, 9:15 IST
Last Updated 6 ಫೆಬ್ರುವರಿ 2011, 9:15 IST

ತುಮಕೂರು: ಜಿಲ್ಲೆಯಲ್ಲಿನ ವಿವಿಧ ಕಾಮಗಾರಿ, ಬಿಡುಗಡೆಯಾದ ಅನುದಾನ, ತುಮಕೂರು ವಿ.ವಿ ನೇಮಕಾತಿ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದವರಿಗೆ ಸುಳ್ಳು ಹಾಗೂ ಸಂಪೂರ್ಣ ಮಾಹಿತಿ ನೀಡದ ಅಧಿಕಾರಿಗಳಿಗೆ ಶನಿವಾರ ಮಾಹಿತಿ ಆಯುಕ್ತ ಜೆ.ಎಸ್.ವೀರೂಪಾಕ್ಷಯ್ಯ ಅವರು ತರಾಟೆ ತೆಗೆದುಕೊಂಡರು.

ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿರುವ ವಿವಿಧ ದೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ವಿಚಾರಣೆ ನಡೆಯಿತು.2007-08ರಲ್ಲಿ ತುಮಕೂರು ವಿಶ್ವವಿದ್ಯಾಲಯದಲ್ಲಿ ಎರಡನೇ ಬಾರಿ ಬೋಧಕೇತರ ಸಿಬ್ಬಂದಿ ನೇಮಕಾತಿಯ ಕುರಿತು ಹನುಮಂತರಾಜು ಕೇಳಿರುವ ಮಾಹಿತಿ ನೀಡಲು ವಿಫಲರಾದ ವಿ.ವಿ.ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಒಬ್ಬ ವಿದ್ಯಾರ್ಥಿಗೆ ಪರೀಕ್ಷೆಯಲ್ಲಿ ನಿಖರವಾದ ಉತ್ತರ ಕೇಳುವ ನೀವು (ವಿ.ವಿ), ಏಕೆ ಮಾಹಿತಿ ನೀಡಿಲ್ಲ ಎಂದು ಪ್ರಶ್ನಿಸಿದರು.ವಿಶ್ವವಿದ್ಯಾಲಯದಲ್ಲಿರುವರು ತಪ್ಪು ಮಾಡಬಾರದು ಎಂಬುದು ನಮ್ಮ ಆಶಯ. ಈಗಲಾದರೂ ಮೊದಲನೇ ಬಾರಿಗೆ ರದ್ದತಿಗೆ ಕಾರಣ ಹಾಗೂ ನೇಮಕಗೊಂಡವರ ಹೆಸರು ತಿಳಿಸಲು ಸೂಚಿಸಿದರು.

ಅದೇ ರೀತಿ ಕುಣಿಗಲ್ ತಹಶೀಲ್ದಾರ್‌ಗೆ ‘ಬೊಮ್ಮನಹಳ್ಳಿ ಗ್ರಾಮಸ್ಥರಿಗೆ ಎಷ್ಟು ಪಡಿತರ ಚೀಟಿ ನೀಡಿದ್ದಿರಿ ಎಂಬುದನ್ನು ಆದಷ್ಟೂ ಬೇಗ ಮಾಹಿತಿ ನೀಡಲು ಸೂಚಿಸಿದರು.
ಪಾವಗಡ ತಾ.ಪಂ.ಗೆ ಬಿಡುಗಡೆಯಾದ ಅನುದಾನದ ಕುರಿತು ಸರಿಯಾದ ಮಾಹಿತಿ ನೀಡದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ವಿರುದ್ದ ದೂರು ದಾಖಲಿಸಿಕೊಂಡರು. ಅದೇ ರೀತಿ ಅರ್ಜಿದಾರರಿಗೆ ಅನವಶ್ಯಕ ತಿರುಗಾಟ ಹಾಗೂ ತಪ್ಪು ಮಾಹಿತಿ ನೀಡಿರುವುದಕ್ಕೆ ಆಯೋಗ ತರಾಟೆಗೆ ತೆಗೆದುಕೊಂಡರು.

ಮೈದಾಳ ಗ್ರಾ.ಪಂ. ವಾರ್ಷಿಕ ಆದಾಯ ಕುರಿತು ಕೇಳಿದ ಪ್ರಶ್ನೆಗೆ ಗ್ರಾ.ಪಂ. ಕಾರ್ಯದರ್ಶಿ, ಅರ್ಜಿದಾರರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಆದರೂ ಅರ್ಜಿದಾರರು ಹೊಂದಾಣಿಕೆ ಮಾಡಿಕೊಳ್ಳೊಣ ಎನ್ನುತ್ತಾರೆ ಎಂದು ದೂರಿದರು. ಮಾಹಿತಿ ಆಯುಕ್ತ ವಿರೂಪಾಕ್ಷಯ್ಯ, ಅಂತವರ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಮಾಹಿತಿ ಹಕ್ಕು ಕುರಿತು ಮಾತನಾಡಿದ ಆಯುಕ್ತರು, ವೈದ್ಯರು, ಪೊಲೀಸರು ಜಾಗೃತರಾಗಿ ಕೆಲಸಮಾಡಬೇಕು. ಪ್ರತಿಯೊಬ್ಬ ವ್ಯಕ್ತಿಗೆ ಸ್ವಾತಂತ್ರ್ಯದ ಹಕ್ಕಿದೆ. ಈ ಹಿನ್ನೆಲೆಯಲ್ಲಿ ಆರೋಪಿಯ ಪಾಲಕರು ಕೇಳಿದ ಮಾಹಿತಿಯನ್ನು ನೀಡಬೇಕು. ಅದೇ ರೀತಿ ವೈದ್ಯರು ಕೂಡಾ ರೋಗಿಯ ಕುರಿತು ಪೋಷಕರು ಕೇಳುವ ಮಾಹಿತಿಗೆ ಇಲ್ಲ ಎನ್ನಬಾರದು ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.