ADVERTISEMENT

ಮಾಹಿತಿ ಸಂಗ್ರಹಕ್ಕೆ 4 ಸಮಿತಿ ರಚನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 9:15 IST
Last Updated 12 ಸೆಪ್ಟೆಂಬರ್ 2011, 9:15 IST

ತುಮಕೂರು: ತುಮಕೂರು ವಿಶ್ವವಿದ್ಯಾಲಯದ ಉದ್ದೇಶಿತ ಭೂ ಸ್ವಾಧೀನ ಪ್ರಕ್ರಿಯೆ ವಿರುದ್ಧ ಕುವೆಂಪು ನಗರ ನಿವಾಸಿಗಳು ನಡೆಸುತ್ತಿರುವ ಹೋರಾಟಕ್ಕೆ ಸಂಘಟಿತ ಸ್ವರೂಪ ನೀಡಲು ಭಾನುವಾರ ರಾತ್ರಿ ಹೊಟೆಲ್ ಮಾಲೀಕರ ಸಂಘದ ಸಭಾಂಗಣದಲ್ಲಿ ನಡೆದ ಸಭೆ ಮಹತ್ವದ ನಿರ್ಣಯ ತೆಗೆದುಕೊಂಡಿದೆ.

ನ್ಯಾಯಾಲಯಗಳಲ್ಲಿ ಹಾಗೂ ಸರ್ಕಾರದ ಮಟ್ಟದಲ್ಲಿ ಹೋರಾಟವನ್ನು ಮುನ್ನಡೆಸಲು ಬೇಕಾದ ಅಗತ್ಯ ಮಾಹಿತಿ, ದಾಖಲೆ, ಕಾಗದ ಪತ್ರ ಮತ್ತು ಹೇಳಿಕೆಗಳನ್ನು ಸಂಗ್ರಹಿಸಲು ನಾಲ್ಕು ಸಮಿತಿಗಳನ್ನು ರಚಿಸಲು ಸ್ಥಳೀಯ ನಿವಾಸಿ ರೆಡ್ಡಿ ನೀಡಿದ ಸಲಹೆಯನ್ನು ಸಭೆ ಒಮ್ಮತದಿಂದ ಅನುಮೋದಿಸಿತು.

ಜಿಲ್ಲಾಧಿಕಾರಿ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ ಮತ್ತು ಬೆಂಗಳೂರಿನ ವಿವಿಧ ಕಚೇರಿಗಳಿಂದ ಮಾಹಿತಿ ಸಂಗ್ರಹಿಸಲು ನಾಲ್ಕು ಪ್ರತ್ಯೇಕ ಸಮಿತಿಗಳ ನೇತೃತ್ವದಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲು ಸಭೆಯಲ್ಲಿ ದೀರ್ಘ ಚರ್ಚೆ ನಡೆಯಿತು.

ಕುವೆಂಪು ನಗರ ಬಡಾವಣೆ ವ್ಯಾಪ್ತಿಯಲ್ಲಿರುವ ನಿವೃತ್ತ ಕಂದಾಯ ಅಧಿಕಾರಿಗಳು, ನಿವೃತ್ತ ಸರ್ಕಾರಿ ನೌಕರರು, ವಕೀಲರು ಮತ್ತು ಆಸಕ್ತ ಸಾರ್ವಜನಿಕರನ್ನು ಒಳಗೊಂಡ ಸಮಿತಿಗಳು ಶೀಘ್ರ ಕಾರ್ಯಪ್ರವೃತ್ತವಾಗಬೇಕು ಎಂದು ಸಂಘದ ಮುಖಂಡ ವಿಶ್ವನಾಥ್ ಅಭಿಪ್ರಾಯಪಟ್ಟರು.

ಶಾಸಕರ ಭರವಸೆ
 ವಿಶ್ವವಿದ್ಯಾಲಯದ ಕಟ್ಟಡಗಳನ್ನು ಊರ ಹೊರಗೆ ನಿರ್ಮಿಸುವ ಬಗ್ಗೆ ಸರ್ಕಾರದಿಂದ ಒತ್ತಡ ಹಾಕಿಸಲು ಪ್ರಯತ್ನಿಸುತ್ತೇನೆಂದು ಶಾಸಕ ಎಸ್.ಶಿವಣ್ಣ ಮತ್ತು ವಿಧಾನ ಪರಿಷತ್ ಸದಸ್ಯ ಹುಲಿನಾಯ್ಕರ್ ಭರವಸೆ ನೀಡಿದ್ದಾರೆ ಎಂದು ವಿಶ್ವನಾಥ್ ತಿಳಿಸಿದರು.

ವಿ.ವಿ ವ್ಯಾಪ್ತಿಗೆ ಬರುವ 11 ಶಾಸಕರು, ಮೂವರು ಸಂಸದರು ಮತ್ತು ಮೂವರು ವಿಧಾನ ಪರಿಷತ್ ಸದಸ್ಯರು ನಿವಾಸಿಗರ ಸಮಸ್ಯೆ ಮನಗಾಣಿಸಿಕೊಡುವುದು ಮತ್ತು ವಿ.ವಿಯನ್ನು ಊರ ಹೊರಗಿನ ವಿಶಾಲ- ಪ್ರಶಾಂತ ಪರಿಸರದಲ್ಲಿ ನಿರ್ಮಿಸುವ ಅಗತ್ಯವನ್ನು ಮನಗಾಣಿಸುವ ಬಗ್ಗೆ ಪ್ರಯತ್ನಿಸಬೇಕೆಂದು ಸಭೆ ಅಭಿಪ್ರಾಯಪಟ್ಟಿತು.

ವಿವಿಧೆಡೆ: ಶಿವಮೊಗ್ಗ, ಬೆಂಗಳೂರು ಮತ್ತು ದಾವಣಗೆರೆ ಪಟ್ಟಣಗಳಲ್ಲಿ ವಿಶ್ವವಿದ್ಯಾಲಯ ಸಮುಚ್ಚಯಗಳು ಊರಿನ ಹೊರಗೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆಯಬೇಕು. ನಗರ ವ್ಯಾಪ್ತಿಯಲ್ಲಿರುವ ಸರ್ಕಾರಿ ವಿಜ್ಞಾನ ಮತ್ತು ಕಲಾ ಕಾಲೇಜುಗಳನ್ನು ವಿಶ್ವವಿದ್ಯಾಲಯ ಕಾಲೇಜುಗಳನ್ನಾಗಿ ಬದಲಿಸಿ- ಉಳಿಸಿಕೊಂಡು, ವಿಶ್ವವಿದ್ಯಾಲಯ ಕಟ್ಟಡವನ್ನು ಊರ ಹೊರಗೆ ನಿರ್ಮಿಸುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಎಂಬ ಅಂಶವನ್ನು ಮನಗಾಣಿಸಲು ಸಭೆ ನಿರ್ಧರಿಸಿತು.

ವಿನಂತಿ: ವಿವಿಧ ಸರ್ಕಾರಿ ಕಚೇರಿಗಳಿಂದ ಮಾಹಿತಿ ಮತ್ತು ದಾಖಲೆಗಳನ್ನು ಸಂಗ್ರಹಿಸಲು ನಿವಾಸಿಗಳು ಮುಂದೆ ಬರಬೇಕು. ಕುವೆಂಪು ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ಆಜೀವ ಸದಸ್ಯರಾಗುವ ಮೂಲಕ ಬೆಂಬಲ ನೀಡಬೇಕೆಂದು ಕೋರಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.