ADVERTISEMENT

ಮೇವಿನ ಕೊರತೆ: ಕ್ರಮಕ್ಕೆ ತಹಶೀಲ್ದಾರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 9:25 IST
Last Updated 7 ಮಾರ್ಚ್ 2012, 9:25 IST

ಮಧುಗಿರಿ: ಜಾನುವಾರುಗಳಿಗೆ ಮೇವಿನ ಕೊರತೆ ಕಂಡುಬಂದಲ್ಲಿ ಆಯಾ ಗ್ರಾಮ ಪಂಚಾಯ್ತಿಗಳಲ್ಲಿ ಜಾನುವಾರು ಸಂಖ್ಯೆಯನ್ನು ರೈತರು ನೋಂದಾಯಿಸಿ ಕೊಳ್ಳಬೇಕೆಂದು ತಹಶೀಲ್ದಾರ್ ಆರ್. ನಾಗರಾಜಶೆಟ್ಟಿ ತಿಳಿಸಿದ್ದಾರೆ.

ತಾಲ್ಲೂಕಿನ ದೊಡ್ಡೇರಿಯಲ್ಲಿ ಹೋಬಳಿ ಮಟ್ಟದ  ಜನಸ್ಪಂದನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ತಾಲ್ಲೂಕಿನಲ್ಲಿ 5 ಕೆ.ಜಿ. ತೂಕದ 4700 ಮೇವಿನ ಬೀಜದ ಚೀಲಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ. ಅಲ್ಲದೆ ನೇರಳೇಕೆರೆ ಹಾಗೂ ದೇವರತೋಪು ಬಳಿ ಗೋಶಾಲೆಯನ್ನು ತೆರೆಯಲು ಸ್ಥಳವನ್ನು ಗುರುತಿಸಿದ್ದು, ಅಗತ್ಯಕ್ಕನುಗುಣವಾಗಿ ಗೋಶಾಲೆ ತೆರೆಯಲಾಗುವುದು ಎಂದರು.

ಪಡಿತರ ಚೀಟಿ, ಮಾಸಾಶನ, ವಿದ್ಯುಚ್ಛಕ್ತಿ ಸಮಸ್ಯೆ, ಶಾಲಾ ಕಟ್ಟಡ ದುರಸ್ತಿ, ಭಾಗ್ಯಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ 32 ಅರ್ಜಿಗಳನ್ನು 15 ದಿನಗಳೊಳ ಗಾಗಿ ವಿಲೇವಾರಿ ಮಾಡಿ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಜಾತಿ ಹಾಗೂ ಅದಾಯ ಪ್ರಮಾಣ ಪತ್ರ ಹಾಗೂ ಇತರೆ
ದೃಢೀಕರಣ ಪತ್ರಗಳನ್ನು 7 ದಿನಗಳ ಒಳಗಾಗಿ ನೀಡುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಯಶೋಧ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಎಇಇ ಲೋಕೇಶ್, ಸಿಡಿಪಿಒ ವಾಸಂತಿ ಉಪ್ಪಾರ್, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಕೋಮಲ, ರಂಗಪ್ಪ, ಕೆಂಚಪ್ಪ, ರಾಮಕೃಷ್ಣಪ್ಪ. ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.