ADVERTISEMENT

ಮೈದಾಳ ಕೆರೆ ನೀರಿಗೆ ಷರತ್ತು

ಏರಿ ಅಭಿವೃದ್ಧಿ ಜತೆ ರಸ್ತೆ ಸಂಪರ್ಕಕ್ಕೆ ಕ್ರಮ ಕೈಗೊಳ್ಳಲು ಶಾಸಕ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 10:23 IST
Last Updated 13 ಜೂನ್ 2018, 10:23 IST

ತುಮಕೂರು: ಕ್ಷೇತ್ರದಲ್ಲಿ ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಇಲ್ಲವಾದಲ್ಲಿ ವರ್ಗಾವಣೆ ಭಾಗ್ಯ ಖಚಿತ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ ಎಚ್ಚರಿಕೆ ನೀಡಿದ್ದಾರೆ.

ಗ್ರಾಮಸ್ಥರೊಂದಿಗೆ ಮೈದಾಳ ಕೆರೆಗೆ ಭೇಟಿ ನೀಡಿ ಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗ ಒತ್ತುವರಿಯನ್ನು ಪರಿಶೀಲನೆ ನಡೆಸಿ ಗ್ರಾಮ ಪಂಚಾಯಿತಿ ಪಿಡಿಒಗಳಿಂದ ಮಾಹಿತಿ ಪಡೆದ ಬಳಿಕ ಅವರು ಮಾತನಾಡಿದರು.

ಪಾಲಿಕೆ ಆಯುಕ್ತರನ್ನು ಕರೆಸಿ ಸಭೆ ನಡೆಸಿದ್ದು, ನಗರಕ್ಕೆ ನೀರು ಬಿಡಬೇಕೆಂದರೆ ಕೆರೆ ಹೊಳೆತ್ತಿಸಿ ಕೆರೆ ಏರಿ ಅಭಿವೃದ್ಧಿ ಪಡಿಸುವುದರ ಜೊತೆಗೆ ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದು ಸೂಚನೆ ನೀಡಿದ್ದೇನೆ. ಇದಕ್ಕೆ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ, ರೈತರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ADVERTISEMENT

ತುಮಕೂರು ನಗರ ಶಾಸಕ, ಪಾಲಿಕೆ ಅಧಿಕಾರಿಗಳು ಕೆರೆ ಅಭಿವೃದ್ಧಿಗಾಗಿ ಮುಂದಾದರೆ ನಾನು ಕೈಜೊಡಿಸುತ್ತೇನೆ. ಇಲ್ಲದಿದ್ದರೆ ನಗರಕ್ಕೆ ನೀರು ಬಿಡುವುದಿಲ್ಲ ಎಂದು ತಿಳಿಸಿದರು.

ಮೈದಾಳ ಕೆರೆಯಿಂದ ಕೆಸರುಮಡು ಹಾಗೂ ಊರ್ಡಿಗೆರೆ ಟೌನ್‌ ಭಾಗಕ್ಕೆ ಕುಡಿಯುವ ನೀರು ನೀಡುವ ಸಂಬಂಧ ಕ್ರಿಯಾ ಯೋಜನೆ ಸಿದ್ದವಾಗುತ್ತಿದೆ. 8 ಇಂಚು ಪೈಪಿನಲ್ಲಿ ನಗರಕ್ಕೆ ಹೋಗುತ್ತಿರುವ ನೀರು 10 ವಾರ್ಡಿಗೆ ಪೂರೈಕೆ ಆಗುತ್ತಿದೆ. ಮುಂದೆ 10 ಇಂಚು ನೀರು ತೆಗೆದುಕೊಂಡು ಹೋದರೆ 15 ವಾರ್ಡಿಗೆ ನೀರು ಪೂರೈಸಬಹುದು. ಇದರ ಪ್ರಸ್ತಾವ ಬಂದಾಗ ಚರ್ಚಿಸುವೆ ಎಂದರು.

ಕುಡಿಯುವ ನೀರಿಗಾಗಿ ಊರ್ಡಿಗೆರೆ ಹೋಬಳಿ ಹಿರೇದೊಡ್ಡವಾಡಿ ಕೆರೆ ಮತ್ತು ದರ್ಗದಹಳ್ಳಿ ಕೆರೆಗೆ ಎತ್ತಿನ ಹೊಳೆ ಯೋಜನೆಯಿಂದ ನೀರು ತುಂಬಿಸಲಾಗುವುದು. ಕಸಬಾ, ಊರ್ಡಿಗೆರೆ, ಬೆಳ್ಳಾವಿ ಹೋಬಳಿಗೆ ಎತ್ತಿನಹೊಳೆ ನೀರು ಹರಿಸುವುದೇ ಮುಖ್ಯ ಗುರಿ ಎಂದರು.

ಗೂಳೂರು ಮತ್ತು ಹೆಬ್ಬೂರು ಏತ ನೀರಾವರಿ ಯೋಜನೆ ನಿಷ್ಕ್ರಿಯವಾಗಿದೆ. ಈ ಯೋಜನೆಯಿಂದ ಗ್ರಾಮಾಂತರ ಭಾಗದ 5ರಿಂದ 6 ಕೆರೆ ತುಂಬಿಸಬಹುದು. ಹಾಗಾಗಿ ಈ ಯೋಜನೆ ಆರಂಭ ಆದಾಗಿನಿಂದ ಇಲ್ಲಿಯವರೆಗೆ ಆಗಿರುವ ಅಭಿವೃದ್ಧಿ ಬಗ್ಗೆ ಸಮಗ್ರ ದಾಖಲೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.