ADVERTISEMENT

ರಂಗೇರಿದ ಚುನಾವಣೆ; 40 ನಾಮಪತ್ರ ಸಲ್ಲಿಕೆ

ಸಚಿವ ಟಿ.ಬಿ. ಜಯಚಂದ್ರ ಸೇರಿ ಹಾಲಿ ಶಾಸಕರಿಂದ ನಾಮಪತ್ರ ಸಲ್ಲಿಕೆ, ಹಿಂದೆ ಬೀಳದ ಸ್ವತಂತ್ರ ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 11:39 IST
Last Updated 21 ಏಪ್ರಿಲ್ 2018, 11:39 IST

ತುಮಕೂರು: ಮೇ 12ರಂದು ನಡೆಯುವ ವಿಧಾನಸಭಾ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು, ಪಕ್ಷೇತರ, ಸ್ವತಂತ್ರ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಕಾರ್ಯ ಚುರುಕುಗೊಂಡಿದೆ.

ಗುರುವಾರ ಇಡೀ ಜಿಲ್ಲೆಯಲ್ಲಿ 19 ನಾಮಪತ್ರ ಸಲ್ಲಿಕೆಯಾಗಿದ್ದವು. ಆದರೆ, ಶುಕ್ರವಾರ 40 ಅಭ್ಯರ್ಥಿಗಳು 11 ವಿಧಾನಸಭಾ ಕ್ಷೇತ್ರಗಳಲ್ಲಿ ಉಮೇದುವಾರಿಕೆ ಸಲ್ಲಿಸಿದರು.

ಶುಕ್ರವಾರ ಶುಭ ದಿನ ಎಂಬ ನಂಬಿಕೆಯಿಂದ ಅನೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮುಂದಾಗಿದ್ದು ಕಂಡು ಬಂದಿತು. ನಾಮಪತ್ರ ಸಲ್ಲಿಕೆಗೂ ಮುನ್ನ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಅಭ್ಯರ್ಥಿಗಳು ಹಿರಿಯರು, ಪಕ್ಷದ ಹಿರಿಯ ಮುಖಂಡರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಬಳಿಕ ಬೆಂಬಲಿಗರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ADVERTISEMENT

ಪ್ರಮುಖ ರಾಜಕೀಯ ಪಕ್ಷಗಳ ಕೆಲ ಅಭ್ಯರ್ಥಿಗಳು ಸಾವಿರಾರು ಬೆಂಬಲಿಗರೊಂದಿಗೆ ಅದ್ಧೂರಿ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು. ಪಕ್ಷದ ಬಾವುಟಗಳು ಮೆರವಣಿಗೆಯುದ್ದಕ್ಕೂ ಹಾರಾಡಿದವು.

ಗುರುವಾರವಷ್ಟೇ ಶಿರಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರು ಶುಕ್ರವಾರ ಬೆಂಬಲಿಗರೊಂದಿಗೆ ತೆರಳಿ ಮತ್ತೊಮ್ಮೆ ಉಮೇದುವಾರಿಕೆ ಸಲ್ಲಿಸಿದರು.

ಸ್ವತಂತ್ರ – ಪಕ್ಷೇತರ ಅಭ್ಯರ್ಥಿಗಳು: ಗುಬ್ಬಿ ಕ್ಷೇತ್ರಕ್ಕೆ ಎಸ್.ಡಿ.ದಿಲೀಪ್‌ಕುಮಾರ್, ಶಿರಾ ಕ್ಷೇತ್ರಕ್ಕೆ ಎಂ.ಚಿದಾನಂದ್, ಎಸ್.ನವೀನ್, ಲಕ್ಷ್ಮಿಕಾಂತ್ ಅವರು ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು.

ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಟಿ.ಬಿ.ಸಿದ್ಧರಾಮೇಗೌಡ, ಜಿ.ಆರ್.ನಾಗರಾಜು, ತುರುವೇಕೆರೆ ಕ್ಷೇತ್ರಕ್ಕೆ ರಾಘವೇಂದ್ರ ಎಂ.ಜೆ.ಲಾಡ್, ಎಂ.ನಾರಾಯಣಗೌಡ, ಕುಣಿಗಲ್ ಕ್ಷೇತ್ರಕ್ಕೆ ಬಿ.ಎಂ.ಹುಚ್ಚೇಗೌಡ, ಎಚ್.ಆರ್.ಆನಂದ್, ಮಧುಗಿರಿ ಕ್ಷೇತ್ರಕ್ಕೆ ಬಿ.ನಾಗೇಶ್‌ಬಾಬು, ಕೆ.ಸಿ.
ಚೌಡಪ್ಪ, ತಿಪಟೂರು ಕ್ಷೇತ್ರಕ್ಕೆ ಎಂ.ಮೈಲಾರಿ, ಜಿ.ನಾರಾಯಣ್ ಅವರು ಪಕ್ಷೇತರ ಅಭ್ಯರ್ತಿಗಳಾಗಿ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಅಭ್ಯರ್ಥಿಗಳು: ಗುಬ್ಬಿ ಕ್ಷೇತ್ರಕ್ಕೆ ಕೆ.ಕುಮಾರ್, ತುರುವೇಕೆರೆ ಕ್ಷೇತ್ರಕ್ಕೆ ರಂಗಪ್ಪ ಟಿ.ಚೌಧರಿ, ಕುಣಿಗಲ್ ಕ್ಷೇತ್ರಕ್ಕೆ ಎಚ್.ಡಿ.ರಂಗನಾಥ್, ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಸಂತೋಷ ಜಯಚಂದ್ರ ಅವರು ನಾಮಪತ್ರ ಸಲ್ಲಿಸಿದರು.

ಬಿಜೆಪಿ ಅಭ್ಯರ್ಥಿಗಳು: ಕೊರಟಗೆರೆ ಕ್ಷೇತ್ರಕ್ಕೆ ವೈ.ಎಚ್.ಹುಚ್ಚಯ್ಯ, ತುರುವೇಕೆರೆ ಕ್ಷೇತ್ರಕ್ಕೆ ಎ.ಎಸ್.ಜಯರಾಮ್(ಮಸಾಲ ಜಯರಾಮ್),ತುಮಕೂರು ನಗರ ಕ್ಷೇತ್ರಕ್ಕೆ ಜಿ.ಬಿ.ಜ್ಯೋತಿಗಣೇಶ್, ತಿಪಟೂರು ಕ್ಷೇತ್ರಕ್ಕೆ ಬಿ.ಸಿ.ನಾಗೇಶ್ ನಾಮಪತ್ರ ಸಲ್ಲಿಸಿದರು.

ಕುಣಿಗಲ್ ಕ್ಷೇತ್ರಕ್ಕೆ ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿ ಡಿ.ನಾಗರಾಜಯ್ಯ ಅವರು ಉಮೇದುವಾರಿಕೆ ಸಲ್ಲಿಸಿದ್ದರೂ ಅವರ ಪುತ್ರ ಡಾ.ಬಿ.ಎನ್.ರವಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದು ವಿಶೇಷ.

ತಿಪಟೂರು ವಿಧಾನ ಸಭಾ ಕ್ಷೇತ್ರಕ್ಕೆ ಶಿವಸೇನೆ ಪಕ್ಷದ ಅಭ್ಯರ್ಥಿಯಾಗಿ ಸಂತೋಷ್‌ಕುಮಾರ್ ಭೈರಾಟೆ ಉಮೇದುವಾರಿಕೆ ಸಲ್ಲಿಸಿದರು. ಶಿರಾ ಕ್ಷೇತ್ರಕ್ಕೆ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿಯಾಗಿ ಗಿರೀಶ್ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ಹಾಲಿ ಶಾಸಕರು

ತುಮಕೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ.ರಫೀಕ್ ಅಹಮದ್, ಮಧುಗಿರಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಎನ್.ರಾಜಣ್ಣ, ತಿಪಟೂರು ವಿಧಾನಸಭಾ ಕ್ಷೇತ್ರಕ್ಕೆ ಕೆ.ಷಡಕ್ಷರಿ ನಾಮಪತ್ರ ಸಲ್ಲಿಸಿದರು.

ಪಾವಗಡ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಕೆ.ಎಂ.ತಿಮ್ಮರಾಯಪ್ಪ, ತುರುವೇಕೆರೆ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಎಂ.ಟಿ.ಕೃಷ್ಣಪ್ಪ, ಗುಬ್ಬಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಎಸ್.ಆರ್.ಶ್ರೀನಿವಾಸ್, ಕುಣಿಗಲ್ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಗಳಾಗಿ ಡಿ.ನಾಗರಾಜಯ್ಯ, ಕೊರಟಗೆರೆ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಪಿ.ಆರ್.ಸುಧಾಕರಲಾಲ್, ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಸಿ.ಬಿ.ಸುರೇಶ್‌ ಬಾಬು ನಾಮಪತ್ರ ಸಲ್ಲಿಸಿದರು.ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಿ.ಸುರೇಶ್‌ಗೌಡ ಶುಕ್ರವಾರ ಮತ್ತೊಮ್ಮೆ ಉಮೇದುವಾರಿಕೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.