ADVERTISEMENT

ರಾಜಲಕ್ಷ್ಮಿ ಬರಗೂರು ಒಂದು ನೆನಪು

ಮಧುಗಿರಿ: ಅನ್ನ ನೀಡಿದ ಅಮ್ಮ ಕಾರ್ಯಕ್ರಮ ನಾಳೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 13:36 IST
Last Updated 28 ಏಪ್ರಿಲ್ 2018, 13:36 IST

ತುಮಕೂರು: ಈಚೆಗೆ ಬೆಂಗಳೂರಿನಲ್ಲಿ ನಿಧನರಾದ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಪತ್ನಿ ರಾಜಲಕ್ಷ್ಮಿ ಅವರ ಸ್ಮರಣಾರ್ಥ ಮಧುಗಿರಿಯಲ್ಲಿ ಏಪ್ರಿಲ್ 29ರಂದು ಬೆಳಿಗ್ಗೆ 11 ಗಂಟೆಗೆ ‘ಅನ್ನ ನೀಡಿದ ಅಮ್ಮ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಪಾವಗಡ ರಸ್ತೆಯಲ್ಲಿರುವ ನಿವೇದಿತಾ ಪಬ್ಲಿಕ್ ಸ್ಕೂಲ್ ಆವರಣದ ಬರಗೂರು ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಬೆಂಗಳೂರು, ತುಮಕೂರು ಮತ್ತು ಮಧುಗಿರಿಯ ಅನೇಕರು ನುಡಿನಮನ ಮತ್ತು ಗೀತ ನಮನ ಸಲ್ಲಿಸಲಿದ್ದಾರೆ. ರಾಜಲಕ್ಷ್ಮಿ ಬರಗೂರು ಅವರನ್ನು ಕುರಿತು ನಟರಾಜ್ ಶಿವು ನಿರ್ಮಿಸಿ ನಿರ್ದೇಶನ ಮಾಡಿರುವ ‘ಅನ್ನ ನೀಡಿದ ಅಮ್ಮ’ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ.

ADVERTISEMENT

ರಾಜಲಕ್ಷ್ಮಿ ಬರಗೂರು ಅವರು ಮಧುಗಿರಿ ತಾಲ್ಲೂಕಿನ ಸಿದ್ದನಹಳ್ಳಿ ಗ್ರಾಮದವರು. 44 ವರ್ಷಗಳ ಹಿಂದೆ ಬರಗೂರರ ಜೊತೆ ಅಂತರ್ ಜಾತಿ ವಿವಾಹವಾದ ದಿಟ್ಟ ಮಹಿಳೆ. ಬರಗೂರರ ಸಾಹಿತ್ಯಿಕ ಮತ್ತು ಸಾಮಾಜಿಕ ಕ್ರಿಯಾಶೀಲತೆಗೆ ಸದಾ ಬೆಂಬಲವಾಗಿ ನಿಂತವರು. ಅನೇಕ ಅಂತರ್ ಜಾತಿ ವಿವಾಹಿತರಿಗೆ ಮನೆಯಲ್ಲೇ ಆಶ್ರಯ ನೀಡಿದ್ದಲ್ಲದೇ ಬಾಣಂತನವನ್ನು ಮಾಡಿ ಮಾತೃತ್ವವನ್ನು ಮೆರೆದಿದ್ದಾರೆ. ನಿರುದ್ಯೋಗಿಗಳಿಗೆ ಊಟ ನೀಡಿದ್ದಲ್ಲದೇ ಬರಗೂರಿಗೆ ಹೇಳಿ ಉದ್ಯೋಗ ಕೊಡಿಸಲು ನೆರವಾಗಿದ್ದಾರೆ.

ಹುಟ್ಟೂರಿನಲ್ಲಿ ಸುಮಾರು 60ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ತಮ್ಮ ಕುಟುಂಬದ ಜಮೀನನ್ನು ಉಚಿತವಾಗಿ ನೀಡಿ ನಿವೇಶನವಾಗಿ ಪರಿವರ್ತಿಸಿ ಆಸರೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೇ, ಈ ಕುಟುಂಬಗಳು ಮನೆ ಕಟ್ಟಿಕೊಳ್ಳಲು ಬರಗೂರರಿಗೆ ಹೇಳಿ ಸರ್ಕಾರದಿಂದ ಸಹಾಯಧನ ಕೊಡಿಸಿದ್ದಾರೆ.

ಹೀಗೆ ಜಾತ್ಯತೀತ ಮೌಲ್ಯವನ್ನು ಕ್ರಿಯೆಯ ಮೂಲಕ ತೋರಿಸಿದ್ದಾರೆ. ಬರಗೂರರಂತೆಯೇ ಯಾವತ್ತೂ ಅಲಕ್ಷಿತರ ಬಗ್ಗೆ ಕಾಳಜಿಯುಳ್ಳರಾಗಿದ್ದ ರಾಜಲಕ್ಷ್ಮಿ ಅವರನ್ನು ಬರಗೂರರ ಆತ್ಮೀಯರು ಅನ್ನ ನೀಡಿದ ಅಮ್ಮ ಎಂದೆ ಕರೆಯುತ್ತ ಬಂದಿದ್ದಾರೆ ಎಂದು ಕಾರ್ಯಕ್ರಮ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.