ADVERTISEMENT

ರೈತರಿಗೆ ಸಂತಸ ತಂದ ಹುಬ್ಬೆ ಮಳೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 8:09 IST
Last Updated 5 ಸೆಪ್ಟೆಂಬರ್ 2013, 8:09 IST

ಚಿಕ್ಕನಾಯಕನಹಳ್ಳಿ: ಸೋಮವಾರ ಸಂಜೆ ಮುಖ ತೋರಿದ ಹುಬ್ಬೆ ಮಳೆ ಮಂಗಳವಾರ ರಾತ್ರಿಯೂ ಬಿರುಸಾಗಿ ಸುರಿಯಿತು. ಆಕಾಶದತ್ತ ಮುಖಮಾಡಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿತು. ಬುಧವಾರ ಕೃಷಿ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಕಂದಿಕೆರೆ ಮತ್ತು ಹುಳಿಯಾರು ಹೋಬಳಿಗಳ ಗುಡ್ಡದ ಸೆರಗಿನ ಹಳ್ಳಿಗಳಾದ ಕಲ್ಮಾಡಿ, ಬೆಳವಾಡಿ, ಗಂಟೆಹಳ್ಳಿ, ತಿರುಮಲದೇವರಹಟ್ಟಿ, ಬೆಳ್ಳಾರ, ಬಡಕೆಗುಡ್ಲು, ಹೊಯ್ಸಳಕಟ್ಟೆ, ಕಲ್ಲೇನಹಳ್ಳಿ, ನುಲೇನೂರು, ದಸೂಡಿ, ದಬ್ಬಕುಂಟೆ, ಸೋಮನಹಳ್ಳಿ, ಗುರುವಾಪುರ ಮತ್ತು ಮೇಲನಹಳ್ಳಿ ಭಾಗದಲ್ಲಿ ಭಾನುವಾರ ರಾತ್ರಿಯೇ ಹನಿಯೊಡೆದ ಮೋಡಗಳು ದಿಬ್ಬಣ ಹೊರಟು ಹಂದನಕೆರೆ ಹೊರತುಪಡಿಸಿ ತಾಲ್ಲೂಕಿನಾದ್ಯಂತ ಮಳೆಯ ತಂಪೆರೆಯಿತು.

ತಾಲ್ಲೂಕಿನ ವಿವಿಧೆಡೆ ಈ ವರ್ಷ ಶತಭಿಷಾ, ಉತ್ತರಾ ಭಾದ್ರಾ ಮಳೆಯಾಯಿತು. ಇದನ್ನೇ ನೆಚ್ಚಿ ರೈತರು ಹೆಸರುಕಾಳು, ಎಳ್ಳು, ಔಡಲ ಬಿತ್ತಿದ್ದರು. ಆದರೆ ನಂತರ ಬರಬೇಕಿದ್ದ ರೇವತಿ, ಅಶ್ವಿನಿ ಮತ್ತು ಭರಣಿ ಮಳೆ ಕೈಕೊಟ್ಟ ಕಾರಣ ಪೂರ್ವ ಮುಂಗಾರು ರೈತರ ಕೈ ಸೇರಲಿಲ್ಲ.

ಏಪ್ರಿಲ್‌ನಲ್ಲಿ ಪ್ರಾರಂಭವಾಗುವ ರೇವತಿ ಪೂರ್ವ ಮುಂಗಾರಿನ ಮೊದಲ ಮಳೆ. ವಾಡಿಕೆಯಂತೆ ತಾಲ್ಲೂಕಿಗೆ 25.2 ಮಿ.ಮೀ ಮಳೆ ಬರಬೇಕು. ಆದರೆ ಈ ವರ್ಷ ಕೇವಲ 7.5 ಮಿ.ಮೀ ಸುರಿಯಿತು. ಕಳೆದ ವರ್ಷ 144.6  ಮಿ.ಮೀಮಳೆಯಾಗಿತ್ತು.

ಪೂರ್ವ ಮುಂಗಾರು ಕೈಕಚ್ಚಿದ್ದರಿಂದ ತಡ ಮುಂಗಾರಿನ ರಾಗಿ ಬೆಳೆಯನ್ನಾದರೂ ದಕ್ಕಿಸಿಕೊಳ್ಳುವ ಹಂಬಲದಿಂದ ರೈತರು ಹೊಲ ಹಸನು ಮಾಡಿಕೊಂಡು ಕಾಯುತ್ತಿದ್ದರು. ಮುಂದಿನ ಕೃತಿಕ, ರೋಹಿಣಿ ಮಳೆಗಳು ರೈತರ ಎದೆಯಲ್ಲಿ ಆಸೆಯ ಬೀಜ ಬಿತ್ತಿದವು. ಕೂಡಿಟ್ಟಿದ್ದ ಬೀಜ ಮತ್ತು ಹಣ ಎರಡನ್ನೂ ಮಣ್ಣಿಗೆ ಸುರಿದರು. ಮೃಗಶಿರ, ಆರ್ದ್ರಾ, ಪುನರ್ವಸು, ಪುಷ್ಯ ಮತ್ತು ಉತ್ತರೆ ಕೈಕೊಟ್ಟ ಕಾರಣ ಬಿತ್ತನೆಯಾದ ಬೀಜಗಳು ಸಸಿಗಳಾಗಿ ಸೀದು ಹೋದವು.

ಸೋಮವಾರದಿಂದ ತಾಲ್ಲೂಕಿನಾದ್ಯಂತ ವ್ಯಾಪಕವಾಗಿ ಸುರಿಯುತ್ತಿರುವ ಹುಬ್ಬೆ ಮಳೆ ರೈತರ ಕಣ್ಣಲ್ಲಿ ಕನಸುಗಳು ಕದಲುವಂತೆ ಮಾಡಿವೆ. ಮಂಗಳವಾರ ಬೆಳಗ್ಗೆ ರೈತರು ಲವಲವಿಕೆಯಿಂದ ಹೊಲಗಳ ಬದು ಸಮಮಾಡುವ ದೃಶ್ಯ ಕಂಡು ಬಂತು. ಬೆಳೆ ಬೆಂದ ಹೊಲ ಕೆಡಿಸಿ ಮತ್ತೆ ಬಿತ್ತುವ ತವಕದಲ್ಲಿ ಅಲ್ಲಲ್ಲಿ ಹೆಗ್ಗುಂಟೆ ಕಟ್ಟಿದ್ದ, ಅಕ್ಕಡಿ ಗೆಣೆ ಹೊಡೆಯುತ್ತಿದ್ದ ಮತ್ತು ಬುಡ್ಡುಗುಂಟೆ ಹೊಡೆಯುತ್ತಿದ್ದ ದೃಶ್ಯಗಳು ಕಂಡು ಬಂದವು.

`ಈ ಮಳೆದು ಯಾವ ನೆಚ್ಗೆ, ಕಾಲ ಕಾಲಕ್ಕೆ ಮಳೆಯಾಗಿದ್ರೆ ಗೌರಿ ಹೊತ್ತಿಗೆ ರಾಸುಗಳು ಗರಿ ಮೇಯ್ಬೇಕಾಗಿತ್ತು. ಈ ಹೊಲ್ಕೆ ನಾಟಿ ರಾಗಿ ಮಾಡಕೆ ಹದಿನೈದು ಸಾವಿರ ಖರ್ಚು ಮಾಡಿದೀನಿ. ಇನ್ನೊಂದ್ ಕೈ ನೋಡೇ ಬಿಡಾನ ಅಂತ ಸಡ್ಡೆ ರಾಗಿ ಮಾಡ್ತಿದೀನಿ' ಎಂದು ಹೊಸಳ್ಳಿಯ ರೈತ ವೀರಭದ್ರಯ್ಯ ನಿಟ್ಟುಸಿರುಬಿಟ್ಟರು.

ಸೆಪ್ಟಂಬರ್15ರಿಂದ ಹಿಂಗಾರು ಬಿತ್ತನೆ ಪ್ರಾರಂಭವಾಗಬೇಕಿದೆ. ಇಲ್ಲಿಯವರೆಗೆ ರಾಗಿ ಬಿತ್ತನೆ ಮಾಡದ ರೈತರು 110 ದಿವಸಕ್ಕೆ ಕೊಯ್ಲಾಗುವ ಇಂಡಾಫ್ 9 ಅಥವಾ 125 ದಿನದ ಇಂಡಾಫ್ 7 ತಳಿಗಳನ್ನು ಬಿತ್ತಬೇಕು. ಸಿರಿಧಾನ್ಯಗಳಾದ ಸಾವೆ, ಹಾರಕ, ನವಣೆ ಬಿತ್ತುವುದು ಸೂಕ್ತ. ಹೊಲ ಹಸನು ಮಾಡಿಕೊಂಡು ಹಿಂಗಾರು ಜೋಳ, ಕಡಲೆ, ಹುರುಳಿಯಂಥ ಬೆಳೆಗಳನ್ನು ಬೆಳೆಯುವುದು ಒಳಿತು ಎಂದು ಕೃಷಿ ಸಹಾಯಕ ಅಧಿಕಾರಿ ನೂರುಲ್ಲಾ ಅಭಿಪ್ರಾಯಪಟ್ಟರು.

ವಾತಾವರಣದಲ್ಲಿ ಗಣನೀಯ ವ್ಯತ್ಯಾಸಗಳು ಕಂಡು ಬರುತ್ತಿವೆ. ಹವಾಮಾನದ ಕ್ಯಾಲೆಂಡರ್ 40 ದಿನ ಹಿಂದಕ್ಕೆ ಚಲಿಸಿದೆ. ಇದೇ ಕಾರಣದಿಂದ ಬೇಗನೆ ಪ್ರಾರಂಭವಾಗುವ ಮಳೆ ರೈತರು ಬಿತ್ತನೆ ಪ್ರಾರಂಭಿಸಿ ಫಸಲಿನ ಕನಸು ಕಾಣುವ ಮುನ್ನ ನಿಲ್ಲುತ್ತಿದೆ. ರೈತರ ಕೃಷಿ ಅನುಭವಕ್ಕೆ ಇದು ಸವಾಲು ಒಡ್ಡುತ್ತಿದೆ.

ಈ ಬೆಳವಣಿಗೆಗೆ ಅರಣ್ಯನಾಶ ಸೇರಿದಂತೆ ಹಲವು ಕಾರಣಗಳಿವೆ. ಹವಾಮಾನ ಮತ್ತು ಕೃಷಿ ಇಲಾಖೆಗಳು ಓಬೀರಾಯನ ಕಾಲದ ಮಾಹಿತಿಗಳನ್ನೇ ರೈತರಿಗೆ ನೀಡುತ್ತ ದಿಕ್ಕುತಪ್ಪಿಸುತ್ತಿವೆ ಎಂದು ಪರಿಸರ ಕಾರ್ಯಕರ್ತೆ ಸೃಜನ ಇಂದಿರಮ್ಮ ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.