ತುಮಕೂರು: ಇನ್ನೂ ಒಂದೂವರೆ ತಿಂಗಳಲ್ಲಿ ಬುಗುಡನಹಳ್ಳಿ ಕೆರೆ ಬರಿದಾಗಲಿದೆ ಎಂಬ ಭೀತಿಯಲ್ಲಿರುವ ನಗರಸಭೆ, ನೀರು ಸರಬರಾಜು ಮಂಡಳಿ ಅಧಿಕಾರಿಗಳು ಇದೀಗ ಕೆರೆ ನೀರು ಬಳಸುತ್ತಿದ್ದ ರೈತರ ಮೇಲೆ ತಮ್ಮ ಕೆಂಗಣ್ಣು ಬೀರಿದ್ದಾರೆ.
ಬುಗುಡನಹಳ್ಳಿ ಕೆರೆ ತುಂಬದಿದ್ದರೂ ರೈತರಿಗೆ ಅನುಕೂಲ ಮಾಡಿಕೊಡಲು ಅಂತರ್ಜಲ ಹೆಚ್ಚುತ್ತದೆ ಎಂದು ನಂಬಿ ತುಮಕೂರು ಅಮಾನಿಕೆರೆ, ಹೆಬ್ಬಾಕ ಕೆರೆಗೆ ನೀರು ತುಂಬಿಸಿ ಕೈ ಸುಟ್ಟಿಕೊಂಡಿದ್ದ ನಗರಸಭೆ ಹಾಗೂ ನಗರ ನೀರು ಒಳಚರಂಡಿ ಮಂಡಳಿ ಅಧಿಕಾರಿಗಳು ಈಗ ರೈತರ ಮೇಲೆಯೇ ಮುಗಿಬೀಳುವಂತಾಗಿದೆ.
ಸುಮಾರು 35ರಿಂದ 40 ರೈತರು ಅಮಾನಿಕೆರೆಗೆ ಮೋಟರ್ ಪಂಪ್ ಅಳವಡಿಸಿ ತೋಟಗಳಿಗೆ ನೀರು ಹೊಡೆದುಕೊಳ್ಳುತ್ತಿದ್ದರು. ಸೋಮವಾರ ಬೆಳಿಗ್ಗೆ ದಿಢೀರ್ ದಾಳಿ ನಡೆಸಿದ ಒಳ ಚರಂಡಿ ಮಂಡಳಿ ಅಧಿಕಾರಿಗಳು ಕೆಲ ರೈತರಿಂದ ಪಂಪ್‌ಗಳನ್ನು ವಶಕ್ಕೆ ಪಡೆದರು ಎಂದು ತಿಳಿದುಬಂದಿದೆ. ಯಾವುದೇ ಕಾರಣಕ್ಕೂ ಕೆರೆ ನೀರು ಬಳಸದಂತೆ ಕಟ್ಟೆಚ್ಚರ ನೀಡಿದ್ದಾರೆ.
ಕೆರೆ ಏರಿ ನಿರ್ವಹಣೆ ಇಲ್ಲದೆ ಹಾಳು ಬಿದ್ದಿದೆ. ಕೆರೆ ನಿರ್ವಹಣೆ ನೋಡಿಕೊಳ್ಳಲು ಜೀಪು ಓಡಾಡುವಷ್ಟು ಅಗಲಕ್ಕೆ ಏರಿ ನಿರ್ಮಿಸಬೇಕಾಗಿತ್ತು. ಆದರೆ ಏರಿ ನೋಡಿದರೆ ಗುಣಮಟ್ಟದ ಕೆಲಸ ನಡೆದಂತೆ ಕಾಣುತ್ತಿಲ್ಲ. ಅಲ್ಲಲ್ಲಿ ಏರಿ ಕಿರಿದಾಗಿದ್ದು, ಹುತ್ತಗಳು ಬೆಳೆದು ನಿಂತಿವೆ. ಹೀಗಾಗಿ ಕೆರೆ ನಿರ್ವಹಣೆ, ಕೆರೆ ನೀರು ಬಳಸದಂತೆ ಕಟ್ಟೆಚ್ಚರ ವಹಿಸಲು ಅಸಾಧ್ಯವಾಗಿದೆ ಎಂದು ನಗರಸಭೆ ಸಿಬ್ಬಂದಿ ಆತಂಕ ತೋಡಿಕೊಂಡರು.
ಹೇಮಾವತಿ ನೀರು ಬಿಡಲು ಮನವಿ ಬುಗುಡನಹಳ್ಳಿ ಕೆರೆ ಅವಧಿಗೆ ಮುಂಚೆಯೇ ಬರಿದಾಗುತ್ತಿರುವ ಹಿನ್ನೆಲೆಯಲ್ಲಿ ಹೇಮಾವತಿ ನೀರು ಹರಿಸುವಂತೆ ಜಿಲ್ಲಾಧಿಕಾರಿ ಆರ್.ಕೆ.ರಾಜು ಹೇಮಾವತಿ ನಾಲಾ ವಲಯ ಅಧಿಕಾರಿಗಳನ್ನು ಕೇಳಿದ್ದಾರೆ. |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.