ADVERTISEMENT

ರೈತಸಂಘದಿಂದ ಕಣಕ್ಕಿಳಿದ ಪತಿ-ಪತ್ನಿ

ಚಿಕ್ಕನಾಯಕನಹಳ್ಳಿ: ಎತ್ತಿನಗಾಡಿಯಲ್ಲಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 11:37 IST
Last Updated 17 ಏಪ್ರಿಲ್ 2013, 11:37 IST
ಕೆಂಕೆರೆ ಸತೀಶ್
ಕೆಂಕೆರೆ ಸತೀಶ್   

ಚಿಕ್ಕನಾಯಕನಹಳ್ಳಿ: ಪತಿ-ಪತ್ನಿ ಇಬ್ಬರೂ ರೈತ ಸಂಘದಿಂದ ನಾಮಪತ್ರ ಸಲ್ಲಿಸಿದ ವಿಶೇಷ ಘಟನೆ ಮಂಗಳವಾರ ನಡೆಯಿತು.
ರೈತ ಸಂಘದ ಕೆಂಕೆರೆ ಸತೀಶ್, ಅವರ ಪತ್ನಿ ಎನ್.ಪಿ.ಚಂದ್ರಕಲಾ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಎತ್ತಿನಗಾಡಿಯಲ್ಲಿ ತಾಲ್ಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ರೈತರ ಮುಂದೆ ಜೋಳಿಗೆ ಹಿಡಿದು ಠೇವಣಿ ಹಣವನ್ನು ಮತದಾರರಿಂದಲೇ ಸಂಗ್ರಹಿಸಿದ್ದು ಮತ್ತೊಂದು ವಿಶೇಷ.

ಬೆಳಿಗ್ಗೆ ಕೆಂಕೆರೆ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದಲಿತ ಮುಖಂಡ ತರಕಾರಿ ರಾಮಣ್ಣ ಮನೆಯಿಂದ ದಿಬ್ಬಣ ಹೊರಟು ಹುಳಿಯಾರಿನಿಂದ ಬೈಕ್ ರ‍್ಯಾಲಿ ಮೂಲಕ ಮುಖ್ಯ ರಸ್ತೆಯಲ್ಲಿ ಸಾಗಿ ಚಿಕ್ಕನಾಯಕನಹಳ್ಳಿ ಪ್ರಮುಖ ಬೀದಿಗಳ ಮೂಲಕ ತಾಲ್ಲೂಕು ಕಚೇರಿಗೆ ಬಂದು ಮಧ್ಯಾಹ್ನ 1.15ರ ಸುಮಾರಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಂಕೆರೆ ಸತೀಶ್, ಪ್ರಣಾಳಿಕೆ ಬಿಡುಗಡೆ ಮಾಡುವ ಪಕ್ಷಗಳು ಜನರಿಗೆ ಆಸೆ ಹುಟ್ಟಿಸಿ ಅಧಿಕಾರ ಹಿಡಿಯುತ್ತವೆ. ರೈತ ಸಂಘ ಪ್ರಣಾಳಿಕೆ ಪ್ರಮಾಣಗಳಿಲ್ಲದೆ ಜನರ ಕಷ್ಟಗಳಿಗೆ ಅಧಿಕಾರವಿಲ್ಲದಿದ್ದರೂ; ಅಧಿಕಾರಿಗಳ ಕೊರಳು ಪಟ್ಟಿ ಹಿಡಿದು ರೈತರಿಗಾಗಿ ಬೀದಿಗಿಳಿಯುತ್ತದೆ ಎಂದರು.

ತಾಲ್ಲೂಕಿಗೆ ಹೇಮಾವತಿ ನೀರು ತರುವ ನಿಟ್ಟಿನಲ್ಲಿ ರೈತ ಸಂಘ ಈಗಾಗಲೇ 68 ದಿನಗಳ ಅಹೋ ರಾತ್ರಿ ಸತ್ಯಾಗ್ರಹ ನಡೆಸಿದೆ. ಅಧಿಕಾರಿಗಳು, ಬ್ಯಾಂಕ್‌ಗಳಿಂದ ರೈತರಿಗೆ ಅನ್ಯಾಯವಾದಾಗ ರೈತ ಸಂಘ ಬೀದಿಗಿಳಿದು ಹೋರಾಟ ನಡೆಸಿದೆ. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೋರಾಟ ನಡೆಸಿದೆ. ತಾಲ್ಲೂಕಿನಲ್ಲಿ ಉತ್ಪತ್ತಿಯಾಗುತ್ತಿರುವ ವಿದ್ಯುತ್‌ನ್ನು ರೈತರ ಪಂಪ್‌ಸೆಟ್‌ಗಳಿಗೆ ಒದಗಿಸುವಂತೆ ಹೋರಾಟ ಮುಂದುವರೆಸಿದೆ ಎಂದರು.

`ಓಟು ಕೊಡಿ ನೋಟು ಕೊಡಿ' `ಬದಲಾವಣೆಗಾಗಿ ಚುನಾವಣೆ' ಎಂಬ ಘೋಷಣೆ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿರುವ ರೈತ ಸಂಘ ಚುನಾವಣೆ ಅಕ್ರಮದ ವಿರುದ್ಧ ಜನ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ಠೇವಣಿ ಹಣವನ್ನು ರೈತರ ಮುಂದೆ ಜೋಳಿಗೆ ಹಿಡಿದು ಸಂಗ್ರಹಿಸಿದರು. ಇದೇ ಮಾದರಿಯಲ್ಲಿ ಕಳೆದ ಬಾರಿ ಸಂಗ್ರಹಿಸಿದ ಹಣದಲ್ಲಿ 30 ಸಾವಿರ ಹಣ ಉಳಿದಿದ್ದು, ಚುನಾವಣಾ ವೆಚ್ಚ ನಾಲ್ಕು ಲಕ್ಷ ಮೀರದಂತೆ ನೋಡಿಕೊಳ್ಳಲಾಗುತ್ತದೆ. ಹಣವನ್ನು ಮತದಾರರಿಂದಲೇ ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.