ADVERTISEMENT

ಲೈನ್‌ಮನ್‌ಗೆ ಸಿಗದ ಸುರಕ್ಷತೆ: ಆತಂಕ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 6:15 IST
Last Updated 9 ಅಕ್ಟೋಬರ್ 2012, 6:15 IST

ತುಮಕೂರು: ಸುರಕ್ಷತೆಗೆ ಒತ್ತು ನೀಡಿ ಎಂದು ಹೇಳುತ್ತಿದ್ದರೂ ಅವಘಡಗಳು ನಿಲ್ಲುತ್ತಿಲ್ಲ ಎಂದು ಬೆಸ್ಕಾಂ ತುಮಕೂರು ವಿಭಾಗದ ಅಧೀಕ್ಷಕ ಎಂಜಿನಿಯರ್ ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಎಂಜಿನಿಯರ್ ಸಂಘ ಹಾಗೂ ಬೆಸ್ಕಾಂ ತುಮಕೂರು ವಿಭಾಗ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಸುರಕ್ಷತಾ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿ ಲೈನ್‌ಮನ್, ಹಮಾಲಿಗೂ ಕುಟುಂಬ ಇರುತ್ತದೆ ಎಂಬುದನ್ನು ಅಧಿಕಾರಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ದುರಸ್ತಿ ಸ್ಥಳದಲ್ಲಿ ಶಾಖಾಧಿಕಾರಿಗಳು ಇರುವುದು ಕಡ್ಡಾಯ. ಸುರಕ್ಷತಾ ಸಾಧನ ಬಳಕೆ ಗೊತ್ತಿರಬೇಕು. ಇಲ್ಲದಿದ್ದರೆ ಸಂಬಂಧಿಸಿದ ಶಾಖಾಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶಪ್ಪ ಮಾತನಾಡಿ, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಜತೆಯಲ್ಲೇ ಸಿಬ್ಬಂದಿ ಸುರಕ್ಷತೆ ಬಗ್ಗೆ ಸದಾ ಗಮನ ನೀಡಬೇಕು ಎಂದು ಒತ್ತಿ ಹೇಳಿದರು.

ಎಂಜಿನಿಯರ್ ನಟರಾಜ್ ಮಾತನಾಡಿ, ಕಂಪೆನಿ, ಸುರಕ್ಷತಾ ಸಾಧನ ಬಳಸುವಂತೆ ಲೈನ್‌ಮನ್‌ಗಳಿಗೆ ಸೂಚಿಸಿದರೂ ಅವರು ಅತ್ತ ಕಡೆ ಗಮನಹರಿಸದೇ ಇರುವುದು ಅವಘಡಗಳಿಗೆ ಕಾರಣ ಎಂದರು.
ಬೆಸ್ಕಾಂ ಸಿಬ್ಬಂದಿ ಬಳಸುವ ಸುರಕ್ಷತಾ ಸಾಧನ ಕಳಪೆಯಾಗಿದ್ದರೆ ಸಂಬಂಧಿಸಿದವರ ಗಮನಕ್ಕೆ ತರುವಂತೆ ಸಂಘದ ಕಾರ್ಯದರ್ಶಿ ಶ್ರೀನಿವಾಸಗೌಡ ಹೇಳಿದರು. ಡಾ.ಮುರಳೀಧರ್ ಪ್ರಾಥಮಿಕ ಚಿಕಿತ್ಸೆ ಕುರಿತು ಉಪನ್ಯಾಸ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.