ADVERTISEMENT

`ವಾಕ್‌ಚತುರ' ಶಂಕರಣ್ಣ

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 7:47 IST
Last Updated 6 ಜುಲೈ 2013, 7:47 IST
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಶಂಕರಣ್ಣ ಅವರನ್ನು ಗೌರವಿಸುತ್ತಿರುವ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ. ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್ ಇದ್ದಾರೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಶಂಕರಣ್ಣ ಅವರನ್ನು ಗೌರವಿಸುತ್ತಿರುವ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ. ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್ ಇದ್ದಾರೆ.   

ನಾಟಕದ ಗೀಳು ಹತ್ತಿಸಿಕೊಂಡು ಊರೂರು ತಿರುಗುತ್ತಿದ್ದ ಹುಡುಗನಿಗೆ ಕನಸು ಮನಸಿನಲ್ಲೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದೀತು ಎಂದು ಅನಿಸಿರಲಿಲ್ಲ. ಹಲ ಸಂಕಷ್ಟ ಬಂದರೂ ನಾಟಕದ ನಂಟು ಮಾತ್ರ ಬಿಡಲಿಲ್ಲ. ಆದರೆ ಅಪ್ಪನಿಂದ ಒಲಿದು ಬಂದ ಹರಿಕಥೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮುಡಿಗೇರಿಸಿತು. ಇದು `ವಾಕ್ ಚತುರ' ಶಂಕರಣ್ಣನ ಕಥೆ.

ಆಗ ಎಂಟನೇ ತರಗತಿ ಇರಬಹುದು. ಮಗನನ್ನು ಹರಿಕಥೆ ಮಾಡಲು ಬಿಟ್ಟ ಅಪ್ಪ ಹರಿಕಥೆ ಮುಗಿದ ಮೇಲೆ ಒಂದೆರಡು ಏಟು ಬಿಗಿದರು. ಕಥೆ ನಡುವೆ ಲಯ ಏಕೆ ತಪ್ಪಿದೆ ಎಂದು ಕೇಳಿದರು. ಒದೆ ತಿಂದ ಹುಡುಗ ಶಂಕರನಿಗೆ ಬೇಸರ ಆಗಲಿಲ್ಲ; ಮತ್ತೂ ಕಲಿಯಬೇಕು ಎನಿಸಿತು. ಇದು ಚಿತ್ರದುರ್ಗ ಜಿಲ್ಲೆಯ ಚಿಪ್ಪಿನಕೆರೆಯ ಹುಡುಗ ಎಸ್.ಸಿ.ಶಂಕರಣ್ಣ, ಈಗ ಜನರ ಬಾಯಲ್ಲಿ `ಹರಿಕಥೆ ದಾಸ' ಆಗಿ ಹೋಗಲು ಕಾರಣವಾಯಿತು.

ಹುಟ್ಟೂರು ಬಿಟ್ಟು ತುಮಕೂರಿನಲ್ಲಿ ನೆಲೆ ನಿಂತಿರುವ ಶಂಕರಣ್ಣ ಹರಿಕಥೆ ದಾಸರಷ್ಟೇ ಅಲ್ಲ, ನಾಟಕಕಾರ, ತತ್ವಪದಕಾರ, ಭಜನೆ, ಭಕ್ತಿಗೀತೆ ಹೀಗೆ ಎಲ್ಲ ಕಲಾ ಪ್ರಕಾರಗಳಲ್ಲೂ ಕೈಯಾಡಿಸಿದವರು.

`ನಾನೊಬ್ಬ ಮಿಶ್ರ ಕಲಾವಿದ' ಎಂದೇ ಬಣ್ಣಿಸಿಕೊಳ್ಳುವ ಶಂಕರಣ್ಣ ಅವರು ಹರಿಕಥೆಯಲ್ಲಿ ಪ್ರಸಿದ್ಧರು. ತುಮಕೂರು ಮಾತ್ರವಲ್ಲ, ಚಿತ್ರದುರ್ಗ, ಬೆಂಗಳೂರು, ಹಾಸನ ಜಿಲ್ಲೆಗಳಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಹರಿಕಥೆ ನೀಡಿ ದಾಖಲೆ ಬರೆದಿದ್ದಾರೆ.

ನಿವೃತ್ತಿ ನಂತರವೂ ಕಲೆಯ ಕಾಯಕ ಬಿಟ್ಟಿಲ್ಲ. ಹರಿಕಥೆ ಮುಂದುವರಿಸಿದ್ದಾರೆ. ಹರಿಕಥೆಯನ್ನು ಸಾಮಾಜಿಕ ಜಾಗೃತಿಯ ಸಾಧನವಾಗಿ ಬಳಸುತ್ತಿರುವ ಪ್ರಯೋಗಶೀಲ ಕಲಾವಿದರಲ್ಲಿ ಇವರೂ ಒಬ್ಬರು. ಏಡ್ಸ್ ಕುರಿತು ಸಿದ್ಧಾರ್ಥ ಎಫ್‌ಎಂ ರೇಡಿಯೋಗೆ ಅವರು ಮಾಡಿಕೊಟ್ಟಿರುವ ಹರಿಕಥೆ ಕುರಿತು ಒಳ್ಳೆ ಮಾತು ಕೇಳಿಬಂದಿವೆ. ಮದ್ಯಪಾನದ ವಿರುದ್ಧವೂ ಹರಿಕಥೆ ಮಾಡಿದ್ದಾರೆ.

ಕೋಳೂರು ಕೊಡಗೂಸು ಅಕ್ಕಮಹಾದೇವಿ ಕುರಿತು ರಚಿಸಿರುವ ಹರಿಕಥೆ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ.
ಸಾಮಾಜಿಕ, ಪೌರಾಣಿಕ ನಾಟಕಗಳ ಅಭಿನಯದಲ್ಲೂ ಎತ್ತಿದ ಕೈ. ಸ್ತ್ರೀರತ್ನ, ಅಣ್ಣತಂಗಿ, ಮಧು ಮಗಳು, ದಾರಿ ದೀಪ, ಬಾಳೊಂದು ನಂದನ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪೌರಾಣಿಕ ನಾಟಕಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ.

ಚಿತ್ರದುರ್ಗದಲ್ಲಿ ಅನಾಥಪುತ್ರ ನಾಟಕ ಪ್ರದರ್ಶನದ ವೇಳೆ ದುಡ್ಡಿಲ್ಲದೆ ಹಾರ‌್ಮೋನಿಯಂ ಮಾರಾಟ ಮಾಡಿ ಊರು ಸೇರಿದ ಪ್ರಸಂಗ ನೆನದು ಸಣ್ಣಗೆ ನಗುವ ಶಂಕರಣ್ಣ ಅವರಿಗೆ ಅಪ್ಪ ಗುರುಪಾದಪ್ಪ ಕಲಿಸಿಕೊಟ್ಟ ಹರಿಕಥೆಯೇ ಹೆಚ್ಚು ಇಷ್ಟವಂತೆ.

ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಇವರ ಮುಡಿಗೇರಿದೆ. ಮಾರುತಿ ಸಂಘ, ನಿವೃತ್ತ ಸರ್ಕಾರಿ ನೌಕರರ ಸಂಘ ಸೇರಿದಂತೆ ಹತ್ತಾರು ಸಂಘ ಸಂಸ್ಥೆಗಳು ಗೌರವಿಸಿವೆ. ಇಳಿ ವಯಸ್ಸಿನಲ್ಲೂ ಹರಿಕಥೆಯಲ್ಲಿ ಪ್ರಯೋಗಶೀಲತೆಯ ಬೆನ್ನಟ್ಟಿ ಸಾಗಿರುವ ಶಂಕರಣ್ಣನಿಗೆ ಹರಿಕಥೆಯಲ್ಲಿ ಮತ್ತಷ್ಟು ಸಾಧಿಸುವ ಹಂಬಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.