ADVERTISEMENT

`ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಅಗತ್ಯ'

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 10:16 IST
Last Updated 4 ಸೆಪ್ಟೆಂಬರ್ 2013, 10:16 IST

ಪ್ರಜಾವಾಣಿ ವಾರ್ತೆ
ತುಮಕೂರು: ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ನೈತಿಕ ಶಿಕ್ಷಣವನ್ನೂ ನೀಡಬೇಕು ಎಂದು ತುಮಕೂರು ವಿ.ವಿ. ಕುಲಪತಿ ಡಾ.ಎ.ಎಚ್.ರಾಜಾಸಾಬ್ ಇಲ್ಲಿ ಮಂಗಳವಾರ ಅಭಿಪ್ರಾಯಪಟ್ಟರು.

ರವೀಂದ್ರ ಕಲಾ ನಿಕೇತನದಲ್ಲಿ ಬಾಪೂಜಿ ವಿದ್ಯಾ ಸಂಸ್ಥೆ ಏರ್ಪಡಿಸಿದ್ದ `ಸ್ವಾತಂತ್ರ್ಯ ಸಂಗ್ರಾಮ ಒಂದು ನೋಟ' ವಿಚಾರ ಸಂಕಿರಣ ಮತ್ತು ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಕಲಿಯಬೇಕು. ಉತ್ತಮ ಪ್ರಜೆಗಳಾಗಲು ಗಾಂಧಿ ವಿಚಾರಧಾರೆಗಳು ದಾರದೀಪವಾಗಲಿ ಎಂದು ಹೇಳಿದರು.

ನಮ್ಮದು ದಾರ್ಶನಿಕ ಪರಂಪರೆಯ ದೇಶ. ಬುದ್ಧ, ಬಸವ ಇಲ್ಲಿ ಸಾಮಾಜಿಕ ಕ್ರಾಂತಿಯ ಬೀಜ ಬಿತ್ತಿದರು. ಸಮಾಜಕ್ಕೆ ಗಾಂಧಿ ವಿಚಾರಧಾರೆ ಇಂದಿಗೂ ಪ್ರಸ್ತುತ. ಆದರೆ ಗಾಂಧಿ ಸೇರಿದಂತೆ ನಮ್ಮ ಎಲ್ಲ ದಾರ್ಶನಿಕರ ಆದರ್ಶಗಳು ಇಂದು ಮರೆಯಾಗುತ್ತಿವೆ. ಉತ್ತಮ ಸಮಾಜ ನಿರ್ಮಾಣಕ್ಕೆ ದಾರ್ಶನಿಕರ ತತ್ವಗಳ ಅನುಸರಣೆ ಅಗತ್ಯ ಎಂದರು.

ಪ್ರತಿಯೊಬ್ಬರು ಪರಸ್ಪರ ಗೌರವಿಸುವ ನಿಷ್ಕಳಂಕ ಜೀವನ ನಡೆಸಬೇಕು. ಪ್ರತಿಯೊಂದು ಧರ್ಮ, ಧರ್ಮ ಗ್ರಂಥವೂ ಮಾನವೀಯತೆಯನ್ನು ಹೇಳುತ್ತದೆ. ಎಲ್ಲ ದಾರ್ಶನಿಕರೂ ಮನುಷ್ಯತ್ವ ಮತ್ತು ಸಮಾನತೆಯನ್ನು ಬೋಧಿಸಿದ್ದಾರೆ ಎಂದು ತಿಳಿಸಿದರು.

ಪ್ರೊ.ಕೆ.ಸಿ.ಬಸಪ್ಪ ಗಾಂಧಿ ವಿಚಾರಧಾರೆ ಕುರಿತು ಉಪನ್ಯಾಸ ನೀಡಿದರು. ಸಂಸ್ಥೆ ಕಾರ್ಯದರ್ಶಿ ಎಂ.ಬಸವಯ್ಯ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಗೌರಮ್ಮ, ಪ್ರಾಚಾರ್ಯ ಗಂಗಾಧರಯ್ಯ, ಬಾಬುರಾವ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.