ADVERTISEMENT

ವಿಶೇಷ ಮಕ್ಕಳಿಗೆ ಸೌಲಭ್ಯ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 6:10 IST
Last Updated 20 ಅಕ್ಟೋಬರ್ 2012, 6:10 IST

ತುಮಕೂರು: ಸಾಮಾನ್ಯ ಮಕ್ಕಳಂತೆ ವಿಶೇಷ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರುವುದು ಅತ್ಯವಶ್ಯಕವಾಗಿದೆ ಎಂದು ಹೆಲನ್ ಕೆಲರ್ ಸಮನ್ವಯ ಶಿಕ್ಷಣ ಸಂಸ್ಥೆ ಸಂಸ್ಥಾಪಕಿ ಗಾಯತ್ರಿ ರವೀಶ್ ಶುಕ್ರವಾರ ತಿಳಿಸಿದರು.

ನಗರದ ಹೆಲನ್ ಕೆಲರ್ ಸಮನ್ವಯ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಮಾರ್ದನಿ ಕಿವುಡ ಮಕ್ಕಳ ಮತ್ತು ತಾಯಂದಿರ ತರಬೇತಿ ಕೇಂದ್ರ ಉದ್ಘಾಟನೆ, ಕಿವುಡರಿಗೆ ಕರಕುಶಲತೆ, ವಧು-ವರರ ಅನ್ವೇಷಣೆ ಹಾಗೂ ಹೊಲಿಗೆ ತರಬೇತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿ ವಿಶೇಷ ಮಕ್ಕಳನ್ನು ಕಿಳರಿಮೆಯಿಂದ ಕಾಣಬೇಡಿ, ಅವರನ್ನು ಸಾಮಾನ್ಯರಂತೆ ಸ್ಪಂದನೀಯ ಮನೋಭಾವದಿಂದ ನೋಡಬೇಕು. ಅಂಗವಿಕಲತೆಯಿಂದ ಕೂಡಿದ ಮಕ್ಕಳು ಜನಿಸಿದರೆ, ಮಗುವನ್ನು ನಿರ್ಲಕ್ಷಿಸಬಾರದು. ವಿಶೇಷ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳನ್ನು ನಿಗದಿತ ವೇಳೆಯಲ್ಲಿ ಓದಗಿಸುವುದರಿಂದ ಅನುಕೂಲವಾಗುತ್ತದೆ, ಆದರೆ ಪ್ರಸ್ತುತ ಸರ್ಕಾರಗಳು ವಿಶೇಷ ಮಕ್ಕಳಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡುವಲ್ಲಿ ಹಿಂದೆ ಬಿದ್ದಿದೆ ಎಂದು ತಿಳಿಸಿದರು.

ವಿಶೇಷ ಮಕ್ಕಳ ತಜ್ಞೆ ಹೇಮಾಮಾಲಿನಿ ಮಾತನಾಡಿ, ಉತ್ತರ ಭಾರತದಲ್ಲಿ ಮೂಲ ಸೌಲಭ್ಯಗಳಿಂದ ವಂಚಿತವಾಗಿರುವ ಹಳ್ಳಿಗಳಲ್ಲೂ ವಿಶೇಷ ಮಕ್ಕಳಿಗಾಗಿಯೇ ವಿಭಿನ್ನವಾದ ತರಬೇತಿ ಶಾಲೆಗಳು ಮಾದರಿಯಂತಿವೆ ಎಂದರು.

ಮುಖಂಡರಾದ ತಿಮ್ಮಪ್ಪ, ನಾಗರತ್ನ ಚಂದ್ರಪ್ಪ, ಆನಂದ ಶಿವಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.