ADVERTISEMENT

ವೆಂಕಟಸುಬ್ಬಯ್ಯಗೆ ರಂಗ ಪುರಸ್ಕಾರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 9:57 IST
Last Updated 21 ಡಿಸೆಂಬರ್ 2012, 9:57 IST
ತುಮಕೂರು: ಹಿರಿಯ ರಂಗಕರ್ಮಿ ಎಚ್.ವಿ.ವೆಂಕಟಸುಬ್ಬಯ್ಯ ಅವರಿಗೆ `ನಾಟಕ ಮನೆ' ವತಿಯಿಂದ ರಂಗ ಪುರಸ್ಕಾರ ನೀಡಿ ಬುಧವಾರ ಗೌರವಿಸಲಾಯಿತು.

ನಗರದ ಡಾ.ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಈ ಪುರಸ್ಕಾರ ಪ್ರದಾನ ಮಾಡಲಾಯಿತು. ಸಮಾರಂಭ ಉದ್ಘಾಟಿಸಿದ ಬೆಂಗಳೂರು ವಿ.ವಿ ನಾಟಕ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಕ.ವೆಂ.ರಾಜಗೋಪಾಲ್ ಮಾತನಾಡಿ, ನಾಟಕ ಮನೆಯು ರಂಗಾಯಣದಂತೆ ಪ್ರಸಿದ್ಧಿ ಪಡೆಯಲಿ ಎಂದು ಹಾರೈಸಿದರು.

ಅಭಿನಂದನಾ ನುಡಿಗಳನ್ನಾಡಿದ ಪ್ರಾಧ್ಯಾಪಕ ಡಾ.ಜೆ.ಶ್ರೀನಿವಾಸಮೂರ್ತಿ, ರಾಜ್ಯದ ವೃತ್ತಿ, ಹವ್ಯಾಸಿ ರಂಗಭೂಮಿ ಚಟುವಟಿಕೆಗಳ ಕುರಿತು ಡಿಜಿಟಲ್ ದಾಖಲೆಯ ಕಾರ್ಯ ಆಗಬೇಕಾಗಿದೆ. ಈ ಕುರಿತಂತೆ  ರಾಜ್ಯದ ವಿಶ್ವವಿದ್ಯಾಲಯಗಳ ನಾಟಕ ವಿಭಾಗಗಳು ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.

ರಂಗಪುರಸ್ಕಾರ ಸ್ವೀಕರಿಸಿ ಮಾತನಾಡಿದ ಎಚ್.ವಿ.ವೆಂಕಟಸುಬ್ಬಯ್ಯ, ನಾಟಕ ರಂಗಕ್ಕೆ ಬರಲು ತಾವು ಕೆಲಸ ನಿರ್ವಹಿಸುತ್ತಿದ್ದ ಪರ್ಯಾಯ ಇಂಧನಗಳ ಇಲಾಖೆಗಳ ಕಚೇರಿ ಕಾರಣ. ಬೆಂಗಾಳಿ ಅಧಿಕಾರಿಗಳು ಪ್ರೋತ್ಸಾಹವೂ ಸಿಕ್ಕಿತು ಎಂದು ಸ್ಮರಿಸಿದರು.
ಮೈಸೂರು ವಿ.ವಿ ಲಲಿತ ಕಲೆಗಳ ಕಾಲೇಜು ನಾಟಕ ವಿಭಾಗದ ಮುಖ್ಯಸ್ಥೆ ಡಾ.ಮೀರಾಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರಂಗಕರ್ಮಿ ಗೋಪಾಲಕೃಷ್ಣ ನಾಯರಿ, ರಂಗತಜ್ಞ ಎಲ್.ಕೃಷ್ಣಪ್ಪ, ನಾಟಕ ಮನೆ ಮಹಾಲಿಂಗು, ತುಮಕೂರು ಶಿವಕುಮಾರ್, ಡಾ.ಶಾರದಾ ವೆಂಕಟಸುಬ್ಬಯ್ಯ ಇತರರು ಇದ್ದರು. ಸಮಾರಂಭದ ಬಳಿಕ ನಾಟಕ ಮನೆ ಕಲಾವಿದರಿಂದ `ಕರಾಳ ರಾತ್ರಿ' ನಾಟಕ ಪ್ರದರ್ಶನವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.