ADVERTISEMENT

ಶಾಲೆ ದುರವಸ್ಥೆಗೆ ಯಾರು ಹೊಣೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 5:15 IST
Last Updated 5 ಜುಲೈ 2012, 5:15 IST

ತಿಪಟೂರು: ಮಕ್ಕಳ ಸಂಖ್ಯೆ ಕ್ಷೀಣಿಸಿ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿರುವ ಸಂದರ್ಭದಲ್ಲೇ ನಗರದ ಸರ್ಕಾರಿ ಶಾಲೆಯೊಂದು ಮಕ್ಕಳಿದ್ದರೂ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ. ನಗರದ ಗಾಂಧಿನಗರದ ಭೋವಿ ಕಾಲೊನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಗರದಲ್ಲಿದ್ದರೂ ಮಕ್ಕಳ ಕೊರತೆ ಎದುರಾಗಿಲ್ಲ.

1ರಿಂದ 7ನೇ ತರಗತಿವರೆಗೆ ಒಟ್ಟು 280 ಮಕ್ಕಳಿದ್ದಾರೆ. ಶಿಕ್ಷಕರ ಮತ್ತು ಕೊಠಡಿ ಕೊರತೆಯೂ ಇಲ್ಲ. ಆದರೆ ಅತ್ಯಗತ್ಯವಾದ ಶೈಕ್ಷಣಿಕ ಪರಿಸರವೇ ಈ ಶಾಲೆಯಲ್ಲಿಲ್ಲ. ಕಡುಬಡವರು, ಸ್ಲಂ ಮಕ್ಕಳು, ದಲಿತರು ಮತ್ತು ಅಲ್ಪಸಂಖ್ಯಾತ ಮಕ್ಕಳೇ ಹೆಚ್ಚಿರುವ ಈ ಶಾಲೆಯ ಶೈಕ್ಷಣಿಕ ವಾತಾವರಣ ಆಶಾದಾಯಕವಾಗಿಲ್ಲ.

ಸರ್ವ ಶಿಕ್ಷಣ ಅಭಿಯಾನದ ನಂತರ ಸರ್ಕಾರಿ ಶಾಲೆಗಳು ಚಿತ್ತಾರದಿಂದ ಕಂಗೊಳಿಸುತ್ತಿದ್ದರೂ; ಈ ಶಾಲೆ ಮಾತ್ರ ಹಳೆ ಮುಖ ಇಟ್ಟುಕೊಂಡಿದೆ. ಒಳಗೋಡೆಗಳು ಮಕ್ಕಳ ಮನಸ್ಸಿಗೆ ಅಹ್ಲಾದ ನೀಡುವುದಿಲ್ಲ.
ಹೊರ ಗೋಡೆ ಮೇಲೆಲ್ಲ ಗಲೀಜು, ಕಲೆ ರಾರಾಜಿಸುತ್ತದೆ.

ಇದಕ್ಕೆಲ್ಲ ಶಿಕ್ಷಣ ಇಲಾಖೆ ನಿರ್ಲಕ್ಷ್ಯವೇ ಕಾರಣ ಎನ್ನುವಂತೆಯೂ ಇಲ್ಲ. ಕಳವಳಕಾರಿ ವಿಷಯವೆಂದರೆ ಶಾಲೆ ದುಸ್ಥಿತಿಗೆ `ಸಮುದಾಯ~ದ ಪಾತ್ರ ದೊಡ್ಡದಿದೆ. ಮಕ್ಕಳ ಪೋಷಕರ ಪಾಲ್ಗೊಳ್ಳುವಿಕೆ ಮೂಲಕ ಶೈಕ್ಷಣಿಕ ಪರಿಸರ ಸುಧಾರಿಸುವ ಉದ್ದೇಶ ಸಮುದಾಯದತ್ತ ಶಾಲೆ ಕಾರ್ಯಕ್ರಮಕ್ಕಿದೆ.

ಆದರೆ ಈ ಶಾಲೆಯ ವಿಷಯದಲ್ಲಿ ಮಾತ್ರ ಸಂಪೂರ್ಣ ವ್ಯತಿರಿಕ್ತ. ಶಾಲೆಯ ದುಸ್ಥಿತಿಗೆ ಕಾರಣ ಕೇಳಿದರೆ ಆ ಶಾಲೆ ಶಿಕ್ಷಕರು, ಸಮುದಾಯದ ಕಡೆ ಬೊಟ್ಟು ಮಾಡುತ್ತಾರೆ.ಶಾಲೆ ಸುತ್ತ ನಿರ್ಮಿಸಿದ್ದ ಕಾಂಪೌಂಡ್ ಈಗ ಉಳಿದಿಲ್ಲ. ಕಾಂಪೌಂಡ್ ಇತ್ತೆನ್ನುವುದಕ್ಕೆ ಕಾಣುವ ಬಾಗಿಲು ವ್ಯಂಗ್ಯವಾಡುತ್ತಿದೆ. ಕಾಂಪೌಂಡ್‌ಗೆ ಬಳಸಿದ್ದ ಸಿಮೆಂಟ್ ಇಟ್ಟಿಗೆಗಳು ಮಂಗಮಾಯ. ಒಂದು ಕೊಠಡಿಯ ಸಿಮೆಂಟ್ ಶೀಟ್‌ಗಳು ಪುಂಡರ ಕಲ್ಲು ಬೀಸಿಗೆ ಪುಡಿಯಾಗಿವೆ. ರಿಪೇರಿ ಮಾಡಿಸಿದ ಮರು ದಿನವೇ ಮತ್ತೆ ಕಲ್ಲುಬಿದ್ದು ತೂತಾಗಿವೆ.

ಸಂಜೆ ಶಾಲೆ ಬಿಡುವುದನ್ನೇ ಕಾಯುವ ಯುವಕರು ಆವರಣವನ್ನೇ ತಮ್ಮ ಸಕಲ ಚಟುವಟಿಕೆಗಳಿಗೆ ಬಳಸುತ್ತಾರೆ. ಗೋಡೆ ಮೇಲೆಲ್ಲ ಚರಂಡಿಯಿಂದ ತೆಗೆದು ಒಗೆದ ಚೆಂಡಿನ ಗುರುತು. ಹಣ ಕಟ್ಟುವ ಗೋಲಿ ಆಟಕ್ಕೆಂದು ಗೋಡೆಯನ್ನೇ ಕೆರೆಯಲಾಗಿದೆ. ಮಕ್ಕಳ ಆಟಕ್ಕೆಂದು ಹಾಕಿದ್ದ ಜೋಕಾಲಿಯ ಕಂಬಿ ನಾಪತ್ತೆಯಾಗಿವೆ. ಶಾಲೆ ಪಡಸಾಲೆಯಲ್ಲಿ ಪೋಲಿಗಳು ಇಸ್ಪೀಟ್ ಆಡುವುದೂ ಇದೆ.

ಮಲ ವಿಸರ್ಜಿಸಿ ಗಲೀಜು ಮಾಡುವುದೂ ಉಂಟು.ಕೆಲ ಸಂದರ್ಭಗಳಂತೂ ಶಾಲಾವರಣ ಅಕ್ಷರಶಃ ಕುರಿ ಗೂಡಾಗಿರುತ್ತದೆ. ಕೆಲ ವ್ಯಾಪಾರಸ್ಥರು ಆವರಣವನ್ನು ರಾತ್ರಿ ಕುರಿ ಕೂಡಲು ಬಳಸುತ್ತಾರೆ. ಕೊಠಡಿ ಬೀಗ ಒಡೆದು ಕುರಿ ಕೂಡಿದ ಉದಾಹರಣೆಯೂ ಉಂಟು ಎಂದು ಶಿಕ್ಷಕರು ಆರೋಪಿಸುತ್ತಾರೆ. ಬೆಳಗ್ಗೆ ಮಕ್ಕಳು ಬಂದರೆ ಆವರಣದಲ್ಲಿರುವ ಕಸ ತೆಗೆಯುವುದು, ಬಾಟಲಿ ಮತ್ತು ಕಲ್ಲು ಆರಿಸಿ ಹೊರ ಹಾಕುವುದೆ ಕೆಲಸ.

ಶಾಲೆ ಸ್ವಚ್ಛತೆಯಲ್ಲಿ ಸಮುದಾಯದ ಸಹಕಾರಕ್ಕಾಗಿ ಪೋಷಕರ ಸಭೆ ಕರೆದು ತಿಳಿಸಿದರೂ ಪ್ರಯೋಜನವಾಗಿಲ್ಲ. ಸಮೀಪದ ಪ್ರಾರ್ಥನಾ ಮಂದಿರದ ಮುಖ್ಯಸ್ಥರಿಗೆ ವಿಷಯ ತಿಳಿಸಿ, ಶಾಲೆ ಸುಸ್ಥಿತಿಗೆ ಸಹಕರಿಸಲು ಬಡಾವಣೆ ಜನರಿಗೆ ಹೇಳುವಂತೆ ಕೋರಿದರೂ ಫಲ ಸಿಕ್ಕಿಲ್ಲ. ಶಾಲಾಭಿವೃದ್ಧಿ ಸಮಿತಿ ತಲೆ ಕೆಡಿಸಿಕೊಂಡರೂ ಪರಿಣಾಮ ಬೀರಿಲ್ಲ ಎಂದು ಶಿಕ್ಷಕರು ದೂರುತ್ತಾರೆ.

ದುರದೃಷ್ಟವೆಂದರೆ ಈ ಶಾಲೆ ಕಟ್ಟಡದ ಹಿಂದೆಯೆ ಪೊಲೀಸ್ ಔಟ್‌ಪೋಸ್ಟ್ ಇದ್ದರೂ ಶಾಲೆ ಆವರಣದಲ್ಲಿ ನಡೆಯುವ ಅನೈತಿಕ ಚಟುವಟಿಕೆ ನಿಯಂತ್ರಣಗೊಂಡಿಲ್ಲ.ತರಗತಿ ಅವಧಿ ಮುಗಿದ ಮರುಕ್ಷಣದಲ್ಲೇ ಶಾಲಾವರಣ ಸಂತೆ ಮೈದಾನದಂತಾಗುತ್ತದೆ. ಇಷ್ಟೆಲ್ಲ ಸಮಸ್ಯೆ ನಡುವೆ ಕುಡಿಯುವ ನೀರಿಗೆ ದೊಡ್ಡ ಕೊರತೆ ಇದೆ. ನಗರಸಭೆ ನಲ್ಲಿಯಲ್ಲಿ ಸಮರ್ಪಕ ನೀರು ಬರುವುದಿಲ್ಲ. ಖರೀದಿಸಿಟ್ಟ ದೊಡ್ಡ ಪಾಸ್ಟಿಕ್ ಟ್ಯಾಂಕ್‌ಗಳು ನೀರು ಕಂಡಿಲ್ಲ. ಬಿಸಿಯೂಟ ಮತ್ತು ಮಕ್ಕಳು ಕುಡಿಯುವ ನೀರಿಗೆ ನಿತ್ಯ ಗೋಳು ತಪ್ಪಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.