ತುಮಕೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ಮಾತ್ರವಲ್ಲ ಜಿಲ್ಲೆಯ ಜೆಡಿಎಸ್‌ನ ಎಲ್ಲ ಶಾಸಕರು ಒಮ್ಮತದಿಂದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎ. ಕೃಷ್ಣಪ್ಪ ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸ್ಥಳೀಯ ಅಭ್ಯರ್ಥಿ, ಹೊರಗಿನವರು ಎಂಬ ಪ್ರಶ್ನೆ ಬರುವುದಿಲ್ಲ. ಪಕ್ಷದ ಯಾವುದೇ ಶಾಸಕರ ವಿರೋಧ ಇಲ್ಲ. ಎಲ್ಲ ಶಾಸಕರ ಸಮ್ಮುಖದಲ್ಲೇ ದೇವೇಗೌಡರು ಆಯ್ಕೆ ಮಾಡಿದರು. ಅಭ್ಯರ್ಥಿ ಬದಲಾಗುವ ಪ್ರಶ್ನೆಯೇ ಇಲ್ಲ. ನಾನೇ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದರು.
ಕ್ಷೇತ್ರದ ಸಮಸ್ಯೆಗಳ ಅರಿವಿದೆ. ನಾಲ್ಕು ಸಲ ಶಾಸಕನಾಗಿ, ಎರಡು ಸಲ ಸಚಿವನಾಗಿ ಆಡಳಿತ ಮತ್ತು ರಾಜಕೀಯದ ಅನುಭವವಿದೆ.
ಇಲ್ಲಿಯ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವೆ. ಜಿಲ್ಲೆಯಲ್ಲಿ ಅನೇಕ ಗೆಳೆಯರಿದ್ದು ಕ್ಷೇತ್ರದ ಸಂಪೂರ್ಣ ಅರಿವಿದೆ ಎಂದು ಹೇಳಿದರು.
೧೩ ಪಂಚವಾರ್ಷಿಕ ಯೋಜನೆಗಳು ಕಳೆದರೂ ದೇಶ ಇನ್ನೂ ಬಡತನದಲ್ಲೇ ನಲುಗುತ್ತಿದೆ. ಶಿಕ್ಷಣ, ಆರೋಗ್ಯ ವ್ಯವಸ್ಥೆ ಸುಧಾರಿಸಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ತೆಂಗು ಮತ್ತು ಅಡಿಕೆ ಒಣಗು ಹೋಗುತ್ತಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿದರೆ ಸಮಸ್ಯೆಗಳ ವಿರುದ್ಧ ದೇವೇಗೌಡರು ಹೋರಾಟ ಮಾಡುತ್ತಾರೆ ಎಂದರು.
ಕಾಂಗ್ರೆಸ್‌ನ ಭ್ರಷ್ಟಾಚಾರ, ಬಿಜೆಪಿಯ ಆಡಳಿತ ವೈಫಲ್ಯ, ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಆಡಳಿತ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದಾಗಿ ತಿಳಿಸಿದರು.
ಎರಡು–ಮೂರು ದಿನಗಳಲ್ಲಿ ಪಕ್ಷದ ಎಲ್ಲ ಶಾಸಕರು, ಮುಖಂಡರು ತಮ್ಮ ಪರವಾಗಿ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ. ಮಾರ್ಚ್ 19ರಂದು ನಾಮಪತ್ರ ಸಲ್ಲಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ತಿಮ್ಮರಾಯಪ್ಪ, ಪಕ್ಷದ ಸಂಸದೀಯ ಮಂಡಳಿ ಸದಸ್ಯ ಎಚ್.ಸಿ. ನೀರಾವರಿ, ಮಾಜಿ ಸಚಿವ ಬಿ.ಸತ್ಯನಾರಾಯಣ್, ಚಿತ್ರ ದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೂಳಿಹಟ್ಟಿ ಶೇಖರ್, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್.ಹುಲಿನಾಯ್ಕರ್, ಹಿರಿಯ ಮುಖಂಡರಾದ ಡಾ.ಅನ್ನದಾನಿ, ವೀರಭದ್ರಯ್ಯ, ಯುವ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬೆಳ್ಳಿಲೋಕೇಶ್ ಇನ್ನಿತರರು ಇದ್ದರು.
ಸಭೆ: ಶಾಸಕರಾದ ಎಸ್.ಆರ್.ಶ್ರೀನಿವಾಸ್, ಸುರೇಶ್‌ಬಾಬು, ಎಂ.ಟಿ.ಕೃಷ್ಣಪ್ಪ ಹಾಗೂ ತಿಮ್ಮರಾಯಪ್ಪ ಅವರೊಂದಿಗೆ ಚುನಾವಣೆ ಕುರಿತು ಎ. ಕೃಷ್ಣಪ್ಪ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.