ADVERTISEMENT

ಶಿಕ್ಷಣದಿಂದ ಸಮುದಾಯದ ಅಭಿವೃದ್ಧಿ

ಹೊರಪೇಟೆಯ ನೀಲಕಂಠೇಶ್ವರಸ್ವಾಮಿ ದೇವಾಲಯದ ಶತಮಾನೋತ್ಸವ ಸಮಾರಂಭದಲ್ಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಮೇ 2018, 8:53 IST
Last Updated 28 ಮೇ 2018, 8:53 IST
ಸಮಾರಂಭವನ್ನು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಉದ್ಘಾಟಿಸಿದರು. ಹುಬ್ಬಳ್ಳಿಯ ನೀಲಕಂಠ ಮಠದ ಶಿವಶಂಕರ ಶಿವಾಚಾರ್ಯ ಸ್ವಾಮಿ, ಬೆಟಗೇರಿಯ ನೀಲಕಂಠ ಮಠದ ನೀಲಕಂಠ ಪಟ್ಟದಾರ್ಯ ಸ್ವಾಮಿ, ಜಿಲ್ಲಾ ಕುರುಹಿನಶೆಟ್ಟಿ ಸಂಘದ ಅಧ್ಯಕ್ಷ ಟಿ.ಎಚ್‌.ಶಿವಾನಂದ್, ಕಾವೇರಿ ಹ್ಯಾಂಡ್‌ ಲೂಮ್ಸ್‌ ಮತ್ತು ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ ಅಧ್ಯಕ್ಷ  ಎನ್‌.ವಿರೂಪಾಕ್ಷಪ್ಪ ಇದ್ದಾರೆ
ಸಮಾರಂಭವನ್ನು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಉದ್ಘಾಟಿಸಿದರು. ಹುಬ್ಬಳ್ಳಿಯ ನೀಲಕಂಠ ಮಠದ ಶಿವಶಂಕರ ಶಿವಾಚಾರ್ಯ ಸ್ವಾಮಿ, ಬೆಟಗೇರಿಯ ನೀಲಕಂಠ ಮಠದ ನೀಲಕಂಠ ಪಟ್ಟದಾರ್ಯ ಸ್ವಾಮಿ, ಜಿಲ್ಲಾ ಕುರುಹಿನಶೆಟ್ಟಿ ಸಂಘದ ಅಧ್ಯಕ್ಷ ಟಿ.ಎಚ್‌.ಶಿವಾನಂದ್, ಕಾವೇರಿ ಹ್ಯಾಂಡ್‌ ಲೂಮ್ಸ್‌ ಮತ್ತು ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ ಅಧ್ಯಕ್ಷ ಎನ್‌.ವಿರೂಪಾಕ್ಷಪ್ಪ ಇದ್ದಾರೆ   

ತುಮಕೂರು: ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸುವ ಮೂಲಕ ಶೈಕ್ಷಣಿಕವಾಗಿ ಸದೃಢಗೊಳಿಸಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿ ಎಂದು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರು ಕುರುಹಿನಶೆಟ್ಟಿ ಸಮಾಜದ ಜನರಿಗೆ ಕರೆ ನೀಡಿದರು.

ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ನಡೆದ ನೀಲಕಂಠೇಶ್ವರ ಸ್ವಾಮಿ ದೇವಾಲಯದ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ‘ಸಮುದಾಯವು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಸಬಲರಾಗಬೇಕು’ ಎಂದರು.

ಹುಬ್ಬಳ್ಳಿಯ ನೀಲಕಂಠ ಮಠದ ಶಿವಶಂಕರ ಶಿವಾಚಾರ್ಯ ಸ್ವಾಮಿ ಮಾತನಾಡಿ, ಎಲ್ಲವು ದೇವರ ಇಚ್ಛೆಯಿಂದ ಸಕಲ ಸೌಲಭ್ಯಗಳು ಸಿಗುತ್ತಿವೆ ಎಂದು ಭಾವಿಸಿ. ಜಾತಿ, ಧರ್ಮ ಎಂದು ಕಿತ್ತಾಡದೆ ಸ್ನೇಹ ಮನೋಭಾವದಿಂದ ಜೀವನ ಸಾಗಿಸಿ ಎಂದು ಆಶೀರ್ವಚನ ನೀಡಿದರು.

ADVERTISEMENT

ಧರ್ಮ ಹಾಗೂ ಸಮಾಜದ ಅಭಿವೃದ್ಧಿಗೆ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಹಾಗಾಗಿ ಎಲ್ಲರೂ ಒಗ್ಗಟ್ಟಿನಿಂದ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಮಾಡುವ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಎಂದರು.

ಕುರುಹಿನಶೆಟ್ಟಿ ಕೇಂದ್ರ ಸಂಘದ ಅಧ್ಯಕ್ಷ ಬಿ.ಈಶ್ವರಪ್ಪ ಭೈರಪ್ಪ ಮಾತನಾಡಿ, ಪೋಷಕರು ಬಡವರಾಗಿರಬಹುದು ಆದರೆ ಮಕ್ಕಳು ಬಡವರಾಗಿರಬಾರದು. ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರು ಬಡ ಮಕ್ಕಳು ಶೈಕ್ಷಣಿಕವಾಗಿ ಮುಂದುರೆಯಲು ಸಹಕರಿಸಿ ಎಂದರು.

ಕಾವೇರಿ ಹ್ಯಾಂಡ್‌ ಲೂಮ್ಸ್‌ ಮತ್ತು ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ನ ಅಧ್ಯಕ್ಷ ಎನ್‌.ವಿರೂಪಾಕ್ಷಪ್ಪ ಮಾತನಾಡಿ, ರಾಜ್ಯದಲ್ಲಿ ಸುಮಾರು ಮೂವತ್ತೇಳು ಲಕ್ಷ ಜನಸಂಖ್ಯೆ ಇರುವ ಕುರುಹಿನ ಶೆಟ್ಟಿ ಜನಾಂಗದವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುವಲ್ಲಿ ಅನ್ಯಾಯ ಮಾಡಿದೆ ಎಂದರು.

‘ಇನ್ನು ಮುಂದಾದರೂ ಪಂಚಾಯಿತಿ, ಪಾಲಿಕೆ, ನಗರಸಭೆ, ವಿಧಾನಸಭೆ, ಲೋಕಸಭೆ ಹೀಗೆ ಎಲ್ಲ ಹಂತದಲ್ಲಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು’ ಎಂದು ಮನವಿ ಮಾಡಿಕೊಂಡರು.

ಅಖಿಲ ಭಾರತ ಕುರುಹಿನಶೆಟ್ಟಿ ಮಹಿಳಾ ಸಮಾಜದ ಅಧ್ಯಕ್ಷೆ ದೇವಿಕಾ ಭೂಷಣ್‌ ಮಾತನಾಡಿ, ಕುಲಬಾಂಧ
ವರು ಸೇರಿ ಮಾಡುವಂತಹ ಕಾರ್ಯಕ್ರಮಗಳಿಂದ ಸಮುದಾಯದ ಸಂಘಟನೆ ಸಾಧ್ಯ ಎಂದರು.

ನೀಲಕಂಠೇಶ್ವರಸ್ವಾಮಿ ಶತಮಾನೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕುರುಹಿನಶೆಟ್ಟಿ ಸಂಘದ ಅಧ್ಯಕ್ಷ ಟಿ.ಎಚ್‌.ಶಿವಾನಂದ್, ಬೆಟಗೇರಿಯ ನೀಲಕಂಠ ಮಠದ ನೀಲಕಂಠ ಪಟ್ಟದಾರ್ಯ ಸ್ವಾಮಿ, ಕುರುಹಿನಶೆಟ್ಟಿ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎಂ.ಆರ್‌.ರಮೇಶ್‌ ಇದ್ದರು.

ಸಚಿವನಾದರೆ ಬೇಡಿಕೆ ಈಡೇರಿಸುವೆ

‘ನಿಮ್ಮ ಇಚ್ಛೆಯಂತೆ ನಾನು ನೂತನ ಸರ್ಕಾರದಲ್ಲಿ ಸಚಿವನಾದರೆ ನಿಮ್ಮ ಬೇಡಿಕೆಯನ್ನು ಈಡೇರಿಸುವೆ.  ಕುರುಹಿನಶೆಟ್ಟಿ ಸಮುದಾಯ ಭವನ ಹಾಗೂ ವಿದ್ಯಾರ್ಥಿ ನಿಲಯವನ್ನು ನಿರ್ಮಾಣಕ್ಕೆ ಸಹಕಾರ ನೀಡುವೆ’ ಎಂದು ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಭರವಸೆ ನೀಡಿದರು.

‘ಬಡ ಮಕ್ಕಳಿಗೆ ಸಹಾಯ ಮಾಡುವುದರಲ್ಲಿ ಸಿಗುವ ಸಂತೋಷ ಬಹುಶಃ ಬೇರೆ ಯಾವ ಕೆಲಸದಲ್ಲಿಯೂ ಸಿಗುವುದಿಲ್ಲ. ಹಿಂದುಳಿದ ವರ್ಗ, ಅಲ್ಪಸಂಖ್ಯಾತರ, ಬಡ ಕುಟುಂಬಗಳ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಹಾಗಾಗಿಯೇ ಗುಬ್ಬಿ ಕ್ಷೇತ್ರದಲ್ಲಿ ಸತತ ನಾಲ್ಕನೇ ಬಾರಿಗೆ ಶಾಸಕನಾಗಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.