ADVERTISEMENT

ಶೇ 9ರಷ್ಟು ಕೆರೆಗಳು ಮಾತ್ರ ಭರ್ತಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 9:34 IST
Last Updated 10 ಅಕ್ಟೋಬರ್ 2017, 9:34 IST
ಕಂದಿಕೆರೆ ಹೋಬಳಿ ಗಂಟೇನಹಳ್ಳಿ ಕೆರೆ
ಕಂದಿಕೆರೆ ಹೋಬಳಿ ಗಂಟೇನಹಳ್ಳಿ ಕೆರೆ   

ತುಮಕೂರು: ಜಿಲ್ಲೆಯಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಬರದಿಂದ ಕಾದಿದ್ದ ಭೂಮಿ ಒದ್ದೆಯಾಗಿದೆ. ಆದರೆ ಜಿಲ್ಲೆಯಲ್ಲಿ ಕೆರೆಗಳು ಯಾವ ಪ್ರಮಾಣದಲ್ಲಿ ತುಂಬಿವೆ ಎನ್ನುವುದನ್ನು ನೋಡಿದರೆ ನಿರಾಶೆಯಾಗುತ್ತದೆ.

ಕಾಲುವೆಗಳು, ಅಚ್ಚುಕಟ್ಟು ಪ್ರದೇಶದ ಒತ್ತುವರಿ ಮತ್ತು ಕೆರೆ ನೀರು ಹರಿದು ಬರುವ ಜಾಗಗಳನ್ನು ರಕ್ಷಿಸಿಕೊಳ್ಳದ ಕಾರಣ ಹಲವು ಕಡೆಗಳಲ್ಲಿ ಮಳೆ ಸುರಿದರೂ ಕೆರೆಗಳಿಗೆ ನೀರು ಹರಿದಿಲ್ಲ ಎನ್ನುವ ಮಾತುಗಳು ವ್ಯಾಪಕವಾಗಿವೆ.

ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 390 ಕೆರೆಗಳು ಇವೆ. ಇವುಗಳಲ್ಲಿ ತುಂಬಿರುವುದು ಕೇವಲ 32. ಅಂದರೆ ಶೇ 9ರಷ್ಟು! ಕೆಲವು ವರ್ಷಗಳಿಂದ ಸತತವಾಗಿ ಬರ ಇದೆ. ಬಿದ್ದ ನೀರೆಲ್ಲ ಇಂಗುತ್ತಿದೆ ಎನ್ನುವುದು ವಾಸ್ತವ. ಆದರೆ ವಿಪರ್ಯಾಸ ಅಂದರೆ ಮಳೆಗಾಲ ಮುಗಿಯುತ್ತಾ ಬಂದರೂ 171 ಕೆರೆಗಳು ನೀರಿಲ್ಲದೆ ಭಣಗುಡುತ್ತಿವೆ. ಈ ಕೆರೆಗಳಲ್ಲಿ ಕನಿಷ್ಠ ದನಕರುಗಳು ಕುಡಿಯುಲು ಸಹ ನೀರಿಲ್ಲ.

ADVERTISEMENT

113 ಕೆರೆಗಳಲ್ಲಿ ಶೇ 30ರಷ್ಟು ನೀರು ತುಂಬಿದೆ. 36 ಕೆರೆಗಳಲ್ಲಿ ಶೇ 30ರಿಂದ ಶೇ 50ರಷ್ಟು ನೀರು ಸಂಗ್ರಹವಾಗಿದೆ. ಎರಡು ತಿಂಗಳಿನಿಂದ‌ ಎಲ್ಲ ತಾಲ್ಲೂಕುಗಳಲ್ಲಿಯೂ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದಿದೆ. ತೀವ್ರ ಬರ ಎಂದು ಗುರುತಿಸುವ ಪಾವಗಡದಲ್ಲಿಯೂ ಮಳೆಯಾಗಿದೆ. ಆದರೆ ಇಲ್ಲಿಯವರೆಗೆ ತಾಲ್ಲೂಕಿನ ಒಂದೇ ಒಂದು ಕೆರೆ ಸಹ ತುಂಬಿಲ್ಲ!

ಕುಣಿಗಲ್ ತಾಲ್ಲೂಕಿನ 26 ಕೆರೆಗಳಲ್ಲಿ 10 ಕರೆಗಳು ತುಂಬಿವೆ. ಶಿರಾ, ಚಿಕ್ಕನಾಯಕನಹಳ್ಳಿ, ತಿಪಟೂರು ತಾಲ್ಲೂಕಿನಲ್ಲಿಯೂ ಆಶಾದಾಯವಾಗಿ ಕೆರೆಗಳು ತುಂಬಿಲ್ಲ. ಗುಬ್ಬಿ ತಾಲ್ಲೂಕಿಗೆ ಉತ್ತಮವಾಗಿ ಮಳೆಯಾಗಿದೆ ಎನ್ನುವುದಕ್ಕೆ ಅಲ್ಲಿನ ಕೆರೆಗಳೇ ಸಾಕ್ಷಿಯಾಗಿವೆ. 30 ಕೆರೆಗಳಲ್ಲಿ 20 ಕೆರೆಗಳು ಶೇ 30ರಷ್ಟು, 6ರಲ್ಲಿ ಶೇ 50ರಷ್ಟು ನೀರು ತುಂಬಿದೆ. 4 ಕೋಡಿ ಹರಿದಿವೆ. ಮಧುಗಿರಿ ತಾಲ್ಲೂಕಿನ 31 ಕೆರೆಗಳಲ್ಲಿ ಶೇ 30ರಷ್ಟು ಹಾಗೂ 11 ಕೆರೆಗಳು ಅರ್ಧ ಮಟ್ಟಕ್ಕಿಂತ ಹೆಚ್ಚು ತುಂಬಿವೆ. ಮತ್ತೆ ಮಳೆಯಾದರೆ ಪೂರ್ಣವಾಗಿ ತುಂಬುವ ನಿರೀಕ್ಷೆ ಇದೆ.

ಅ.7ರ ವರೆಗೆ ತುಂಬಿರುವ ಕೆರೆಗಳು: ತುಮಕೂರು ತಾಲ್ಲೂಕಿನ ಲಿಂಗಾಪುರ, ದುರ್ಗದಹಳ್ಳಿ ಹೊಸಕೆರೆ, ಢಣಕನಾಯಕನಪುರ, ಕುಣಿಗಲ್ ತಾಲ್ಲೂಕಿನ ನೀಲತ್ತನಹಳ್ಳಿ ಕೆರೆ, ಉಜ್ಜನಿಹೊಸಕರೆ, ಹಳೇವೂರು ಕೆರೆ, ಬೆಳ್ಳಿಬೆಟ್ಟದ ತೊರೆಕೆರೆ, ಕಾಚಿಹಳ್ಳಿ ಕೆರೆ, ಕತ್ತರಿಘಟ್ಟ ಕೆರೆ, ಹಾಲುವಾಗಿಲು ಹಿರೇಕೆರೆ, ಬ್ಯಾಲದ ಕೆರೆ, ಮಲ್ಲಾಪುರ ಕೆರೆ, ಮುದ್ದಲಿಂಗನದೊಡ್ಡಿ ಕೆರೆ ತುಂಬಿವೆ. ಕೊರಟಗೆರೆ ತಾಲ್ಲೂಕು ಜಂಪೇನಹಳ್ಳಿ ಹೊಸಕೆರೆ, ನವಿಲುಕುರ್ಕೆ ಕೆರೆ, ಬುಕ್ಕಾಪಟ್ಟಣ ನಾಗೇನಹಳ್ಳಿ ಕೆರೆ, ಮಧುಗಿರಿಯ ಮಿಡಿತರ ಹಳ್ಳಿ ಕೆರೆ, ರಂಗನಪಾಳ್ಯ ಹೊಸಕೆರೆ, ಗಿಡದಾಗಲಹಳ್ಳಿ ಕೆರೆಗಳು ಭರ್ತಿಯಾಗಿವೆ.

ಶಿರಾ ತಾಲ್ಲೂಕಿನ ನಿಡಗಟ್ಟೆ ಕೆರೆ, ನೇಜಂತಿ ಕೆರೆ, ಬುಕ್ಕಾಪಟ್ಟಣ, ಚಿಕ್ಕನಾಯಕನಹಳ್ಳಿ ಗಂಟೇನಹಳ್ಳಿ ಕೆರೆ, ಆಶ್ರೀಹಾಳ ಕೆರೆ, ದೇವರ ಮರಡಿಕೆರೆ, ತಿಪಟೂರು ತಾಲ್ಲೂಕಿನ ಕರಡಾಳು, ಹೊಗವನಘಟ್ಟ ಕೆರೆ ಕೋಡಿ ಬಿದ್ದಿವೆ. ಗುಬ್ಬಿ ತಾಲ್ಲೂಕಿನ ಹೂವಿನಕಟ್ಟೆ ಕೆರೆ, ಗುಡ್ಡೇನಹಳ್ಳಿ ಕೆರೆ, ಗಂಡೀಕೆರೆಯ ಕೆರೆ, ಮುಚ್ಚವೀರನಹಳ್ಳಿ ಕೆರೆ ಭರ್ತಿಯಾಗಿವೆ.
ಮರುಳುಗಾರಿಕೆ; ಒತ್ತುವರಿ ಭೂತ: ಬಹುತೇಕ ಕೆರೆಗಳು ಒತ್ತುವರಿಯಾಗಿವೆ. ಅಚ್ಚುಕಟ್ಟು ಪ್ರದೇಶ ಇಲ್ಲದಾಗಿದೆ. ಕಾಲುವೆಗಳು ಮುಚ್ಚಿವೆ. ಮರಳನ್ನು ತೆಗೆಯಲಾಗುತ್ತಿದೆ. ಇದರಿಂದ ಕೆರೆಗಳಿಗೆ ನೀರು ಹರಿದು ಬರುತ್ತಿಲ್ಲ ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಗ್ರಾಮದ ರೈತ ಪ್ರಕಾಶ್ ತಿಳಿಸುವರು.

ಈ ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಹೆಚ್ಚಿನ ಮಳೆಯಾಗಿಲ್ಲ ಎಂದು ಬಹುತೇಕ ರೈತರು ಹೇಳುವರು. ಜತೆ ಜತೆಯಲ್ಲಿಯೇ ಕೆರೆ ಸಂರಕ್ಷಿಸದಿದ್ದ ಕಾರಣ ನೀರು ಸಂಗ್ರಹವಾಗುತ್ತಿಲ್ಲ ಎನ್ನುವರು.

ಪಟ್ಟಿ
ತಾಲ್ಲೂಕು, ಕೆರೆಗಳ ಸಂಖ್ಯೆ, ಅರ್ಧಕ್ಕಿಂತ ಹೆಚ್ಚು ನೀರಿರುವ ಕೆರೆಗಳು, ಪೂರ್ಣ ತುಂಬಿರುವ ಕೆರೆಗಳು
ತುಮಕೂರು        48                       10                                                 3
ಕುಣಿಗಲ್            26                       1                                                  10
ಕೊರಟಗೆರೆ         45                        3                                                   4
ಮಧುಗಿರಿ           56                       13                                                  3
ತಿಪಟೂರು         24                        0                                                    2
ಗುಬ್ಬಿ                30                        0                                                    4
ತುರುವೇಕೆರೆ       3                          0                                                    0
ಶಿರಾ                62                        1                                                    3
ಚಿಕ್ಕನಾಯಕನಹಳ್ಳಿ 38                      1                                                    3
ಪಾವಗಡ            38                       0                                                    0
ಒಟ್ಟು               370                      19                                                   32

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.