ADVERTISEMENT

ಸಮಸ್ಯೆ ಹುಡುಕಾಟಕ್ಕೆ ನಾಯಕರ ಪೇಚಾಟ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 9:11 IST
Last Updated 30 ಅಕ್ಟೋಬರ್ 2017, 9:11 IST

ಶಿರಸಿ: ವಿಧಾನಸಭೆಯ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ಸಾರ್ವಜನಿಕ ಸಮಸ್ಯೆಗಳ ಹುಡುಕಾಟದಲ್ಲಿ ನಿರತವಾಗಿವೆ. ನಿತ್ಯ ಬೆಳಗಾದರೆ ಕೊರತೆ ಮುಂದಿಟ್ಟುಕೊಂಡು ಪ್ರತಿಭಟನೆಯ ಹೆಸರಿನಲ್ಲಿ ಜನರನ್ನು ಸೆಳೆಯುವ ಹೊಂಚು ಹಾಕುತ್ತಿವೆ.

ಪ್ರತಿ ಬಾರಿ ಚುನಾವಣೆ ಹೊಸಿಲ ಬಳಿ ಬಂದಾಗ ಮೈಕೊಡವಿ ಏಳುತ್ತಿದ್ದ ಜೆಡಿಎಸ್‌ ಈ ಬಾರಿ ಮುಂಚಿತವಾಗಿ ಎಚ್ಚೆತ್ತುಕೊಂಡು ಕಾಂಗ್ರೆಸ್ ಮತ್ತು ಬಿಜೆಪಿಗೆ ಪೈಪೋಟಿಯೊಡ್ಡುತ್ತಿದೆ. ರಸ್ತೆ ದುರವಸ್ಥೆ, ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದಲ್ಲಿ ವಿಳಂಬ, ಇ ಸ್ವತ್ತು ಸಮಸ್ಯೆಗಳು ಬಿಜೆಪಿಯ ಪ್ರಮುಖ ವಿಷಯಗಳಾದರೆ, ನಗರ ಸ್ಥಳೀಯ ಸಂಸ್ಥೆಗಳ ಫಾರ್ಮ್ ನಂಬರ್ 3 ಸಮಸ್ಯೆ, ಆಧಾರ್ ಕಾರ್ಡ್ ಮಾಡುವಲ್ಲಿನ ವಿಳಂಬ ಜೆಡಿಎಸ್‌ನ ಹೋರಾಟದ ಪ್ರಮುಖ ಅಜೆಂಡಾ ಆಗಿದೆ.

‘ಉಜ್ವಲ್ ಯೋಜನೆಯಡಿ ಗ್ಯಾಸ್ ವಿತರಣೆಯಲ್ಲಿ ಬಡವರಿಗೆ ಮೋಸವಾಗುತ್ತಿದೆ. ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ’ ಆರೋಪಿಸಿ ಕಾಂಗ್ರೆಸ್ ಬೀದಿಗಿಳಿದಿದೆ. ‘ಚುನಾವಣೆ ವರ್ಷ ಬಂದಾಗ ರಾಜಕೀಯ ಪಕ್ಷಗಳು ಎಚ್ಚೆತ್ತುಕೊಳ್ಳುತ್ತವೆ. ಉಳಿದ ದಿನಗಳಲ್ಲಿ ನಮ್ಮ ಗೋಳನ್ನು ಕೇಳುವವರಿಲ್ಲ. ಮತದ ಆಸೆಗಾಗಿ ನಮ್ಮನ್ನು ದಾಳವಾಗಿ ಬಳಸಿಕೊಳ್ಳಲು ರಾಜಕೀಯ ನಾಯಕರು ಹವಣಿಸುತ್ತಾರೆ’ ಎಂದು ಇತ್ತೀಚೆಗೆ ಇಲ್ಲಿ ನಡೆದ ಬಿಜೆಪಿ ಪ್ರತಿಭಟನೆಯ ವೇಳೆ ಸಾರ್ವಜನಿಕರೊಬ್ಬರು ಪಿಸುಮಾತಿನಲ್ಲಿ ಹೇಳಿದರು.

ADVERTISEMENT

ಟಿಕೆಟ್ ಲಾಬಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಶಾಸಕರನ್ನು ಹೊಂದಿರುವ ಏಕೈಕ ಕ್ಷೇತ್ರ ಸಿದ್ದಾಪುರ. ಸತತ ಐದನೇ ಬಾರಿಗೆ ಶಾಸಕರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಈ ಬಾರಿ ಪಕ್ಷದಲ್ಲೇ ಸ್ಪರ್ಧಿಗಳು ಸಿದ್ಧವಾಗಿದ್ದಾರೆ. ಬಿಜೆಪಿಯ ಇನ್ನೊಂದು ಬಣದ ಕಾರ್ಯಕರ್ತರ ಹೆಸರನ್ನು ಹರಿಯಬಿಡುವ ಕಾಯಕ ಜೋರಾಗಿ ನಡೆಯುತ್ತಿದೆ.

ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಟಿಕೆಟ್‌ ನಿರೀಕ್ಷೆಯಲ್ಲಿ ವ್ಯವಸ್ಥಿತವಾಗಿ ಪಕ್ಷ ಸಂಘಟನೆ ಮಾಡಿದ್ದಾರೆ. ಆದರೆ ಕಾಂಗ್ರೆಸ್‌ನ ಹಿರಿಯ ನಾಯಕ ಮಾರ್ಗರೆಟ್ ಆಳ್ವ ಪುತ್ರ, ಕೆಪಿಸಿಸಿ ಕಾರ್ಯದರ್ಶಿ ನಿವೇದಿತ್‌ ಆಳ್ವ ಹೈಕಮಾಂಡ್ ಮಟ್ಟದಲ್ಲಿ ಟಿಕೆಟ್‌ಗೆ ಲಾಬಿ ನಡೆಸಿದ್ದಾರೆ. ಅಲ್ಲದೇ ತಿಂಗಳಿಗೊಮ್ಮೆಯಾದರೂ ಶಿರಸಿಗೆ ಬರುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಈಗ ಹಳಿಯಾಳ ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಬಹಿರಂಗವಾಗಿ ಹೇಳುತ್ತಾರೆ.

‘ಸಿದ್ದಾಪುರದ ಶಶಿಭೂಷಣ ಹೆಗಡೆ ಜೆಡಿಎಸ್ ಅಭ್ಯರ್ಥಿ ಎಂದು ಆರು ತಿಂಗಳ ಹಿಂದೆ ತಾಲ್ಲೂಕಿಗೆ ಭೇಟಿ ನೀಡಿದ್ದ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಘೋಷಿಸಿ ಹೋಗಿದ್ದರು. ಆದರೂ ಕಾಣದ ಕೈಗಳಿಂದ ಇದನ್ನು ತಪ್ಪಿಸುವ ಹವಣಿಕೆ ತೆರೆಮರೆಯಲ್ಲಿ ನಡೆಯುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ಕಾರ್ಯಕರ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ನಾಯಕತ್ವದ ಕೊರತೆ: ಜಿಲ್ಲೆಯಲ್ಲಿ ಮಿಂಚಿನ ಸಂಚಾರ ಮಾಡುತ್ತಿದ್ದ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಕೇಂದ್ರ ಸರ್ಕಾರದ ಸಚಿವರಾಗಿ ಅಧಿಕಾರವಹಿಸಿಕೊಂಡ ಕಾರ್ಯಭಾರದ ಒತ್ತಡದಿಂದ ಅಷ್ಟಾಗಿ ಜಿಲ್ಲೆಗೆ ಭೇಟಿ ನೀಡಲು ಆಗುತ್ತಿಲ್ಲ. ಬೇರೆ ಬೇರೆ ಪಕ್ಷಗಳ ಮಾಜಿ ಶಾಸಕರು ಬಿಜೆಪಿ ಸೇರ್ಪಡೆಗೊಂಡಿದ್ದರೂ, ಈ ಪಕ್ಷ ಎರಡನೇ ಹಂತದ ನಾಯಕತ್ವದ ಕೊರತೆ ಎದುರಿಸುತ್ತಿದೆ.

ಜಿಲ್ಲೆಗೆ ಭೇಟಿ ನೀಡಿದಾಗಲೇ ಹಿಂದುತ್ವ, ರಾಷ್ಟ್ರೀಯವಾದದ ಹೇಳಿಕೆ ನೀಡುವ ಮೂಲಕ ಪಕ್ಷದ ಹವಾ ಸೃಷ್ಟಿಸುವ ಅನಂತಕುಮಾರ್ ಹೆಗಡೆ ಪ್ರಯತ್ನ ಸಫಲವಾಗುತ್ತಿದೆ. ಮೊದಲ ಬಾರಿಗೆ ಕೇಂದ್ರ ಸಚಿವ ಸ್ಥಾನ ದೊರೆತಿರುವ ಜಿಲ್ಲೆಯಲ್ಲಿ ಪಕ್ಷದ ವರ್ಚಸ್ಸು ಹೆಚ್ಚಿಸುವ ಹೊಣೆಗಾರಿಕೆಯೂ ಅವರ ಮೇಲಿದೆ. ಪರಸ್ಪರ ಕೆಸರೆರಚಾಟ, ಪ್ರತಿಭಟನೆಗಳೇ ಮೂರು ಪ್ರಮುಖ ರಾಜಕೀಯ ಪಕ್ಷಗಳ ದೈನಂದಿನ ಚಟುವಟಿಕೆಯಾಗಿ ಪರಿಣಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.