ADVERTISEMENT

ಸಮಾಜಮುಖಿ ಕೆಲಸದಿಂದ ಅಭಿವೃದ್ಧಿ ಸಾಧ್ಯ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 6:35 IST
Last Updated 22 ಮಾರ್ಚ್ 2014, 6:35 IST

ತುಮಕೂರು: ಸಹಕಾರಿ ಬ್ಯಾಂಕ್‌ಗಳು ಹಣಕಾಸು ವ್ಯವಹಾರದ ಜತೆಗೆ ಸಮಾಜಮುಖಿ ಕೆಲಸದತ್ತಲೂ ಗಮನ ಹರಿಸಬೇಕು ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಆರ್ಯ ವೈಶ್ಯ ಕೋ–ಆಪರೇಟಿವ್‌ ಬ್ಯಾಂಕ್‌ ನೂತನ ಶಾಖೆಯ ಕಟ್ಟಡ ಉದ್ಘಾಟನೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಸಮುದಾಯ ಅಭಿವೃದ್ಧಿ, ವ್ಯಾಪಾರಸ್ಥರ ಆರ್ಥಿಕ ಅನುಕೂಲಕ್ಕಾಗಿ ಸಹಕಾರಿ ಬ್ಯಾಂಕ್‌ಗಳು ಹುಟ್ಟಿಕೊಂಡಿದ್ದು, ಸಮಾಜದ ಉದ್ಧಾರಕ್ಕೆ ಶ್ರಮಿಸುತ್ತಿವೆ. ಜತೆಗೆ ಜನರಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುತ್ತಿವೆ ಎಂದು ಸ್ವಾಮೀಜಿ ತಿಳಿಸಿದರು.

ADVERTISEMENT

ಆರ್ಯ ವೈಶ್ಯ ಕೋ ಅಪರೇಟಿವ್‌ ಬ್ಯಾಂಕ್‌ ನಗರದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಕುಡಿಯುವ ನೀರು, ಚಿಕ್ಕಪೇಟೆ ಗಾರ್ಡನ್‌ ರಸ್ತೆಯಲ್ಲಿ ಸಾರ್ವಜನಿಕ ಸ್ಮಶಾನ ಅಭಿವೃದ್ಧಿ, ಬ್ಯಾಂಕ್‌ ಸದಸ್ಯರು, ಗ್ರಾಹಕರಿಗೆ ಉಚಿತ ವೈದ್ಯಕೀಯ ಸೌಲಭ್ಯ, ಸಮುದಾಯದ ಬಡ, ದುರ್ಬಲ ಮಕ್ಕಳಿಗೆ ಆರ್ಥಿಕ ನೆರವು ನೀಡುತ್ತಿದೆ ಎಂದರು.

ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್‌.ಪಿ.ರವಿಶಂಕರ್‌, ಚಾರ್ಟಡ್‌ ಅಕೌಂಟೆಂಟ್‌ ಐ.ಎಸ್‌.ಪ್ರಸಾದ್‌, ವಾಸವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿ.ಎ.ಸೋಮೇಶ್ವರ ಗುಪ್ತ, ನಗರಪಾಲಿಕೆ ಸದಸ್ಯೆ ಎಚ್‌.ಪಿ.ಮಂಜುಳ, ಆರ್ಯವೈಶ್ಯ ಬ್ಯಾಂಕ್‌ ಅಧ್ಯಕ್ಷ ಎಸ್‌.ಆರ್‌.ಶ್ರೀಧರಮೂರ್ತಿ, ಉಪಾಧ್ಯಕ್ಷ ಟಿ.ಟಿ.ಸತ್ಯನಾರಾಯಣ, ಲತಾ ಶ್ರೀನಿವಾಸ್‌ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ವಿಜಯನಗರ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಬ್ಯಾಂಕ್‌ ಶಾಖೆ ಕಟ್ಟಡವನ್ನು ಡಾ.ಶಿವಕುಮಾರ ಸ್ವಾಮೀಜಿ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.