ADVERTISEMENT

ಸರ್ಕಾರಿ ಕಾಲೇಜಿನ ಕ್ರೀಡಾ ಸಾಧನೆ

ಜಿ.ಧನಂಜಯ
Published 18 ಡಿಸೆಂಬರ್ 2013, 9:32 IST
Last Updated 18 ಡಿಸೆಂಬರ್ 2013, 9:32 IST

ಮುನ್ನಡೆಸುವ ಗುರು ಸಿಕ್ಕರೆ ಹಳ್ಳಿ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಕ್ರೀಡಾ ಪ್ರತಿಭೆ ಹೇಗೆ ಪ್ರಕಟಗೊಳ್ಳುತ್ತದೆ; ಎಂಬುದಕ್ಕೆ ಚಿಕ್ಕನಾಯಕನ­ಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ­ಗಳ ಸಾಧನೆಯೇ ಜೀವಂತ ಸಾಕ್ಷಿ­ಯಾಗಿದೆ.

ಈಚೆಗೆ ತುಮಕೂರು ವಿಶ್ವ ವಿದ್ಯಾಲಯವು ತುಮಕೂರಿನಲ್ಲಿ ಆಯೋಜಿಸಿದ್ದ ಅಂತರ ಕಾಲೇಜು ಕುಸ್ತಿ ಮತ್ತು ಭಾರ ಎತ್ತುವ ಸ್ಪರ್ಧೆಗಳಲ್ಲಿ ಚಿಕ್ಕನಾಯಕನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು 2 ಚಿನ್ನ, 4 ಬೆಳ್ಳಿ, 2 ಕಂಚು ಪಡೆದಿದ್ದಾರೆ. ಜೊತೆಗೆ ಸಮಗ್ರ ಪ್ರಶಸ್ತಿ­ಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಭಾರ ಎತ್ತುವ ಸ್ಪರ್ಧೆಯ ಪುರುಷರ ವಿಭಾಗ­ದಲ್ಲಿ ಸುಹಾಸ್‌ ಸಿದ್ದು, ಮಹಿಳಾ ವಿಭಾಗದಲ್ಲಿ ಎಂ.ಎಸ್.ಪವಿತ್ರಾ ಚಿನ್ನದ ಸಾಧನೆ ಮಾಡಿದರು. ಸಿ.ಎಸ್.ವಿನಯ್‌ಕುಮಾರ್, ಟಿ.ಎಲ್.ವಿವೇಕ್, ಎಂ.ಆರ್.ಕೋಮಲತಾ ಬೆಳ್ಳಿ ಪದಕ, ವಿದ್ಯಾ ಮತ್ತು ಶ್ವೇತ ಕಂಚು, ಕುಸ್ತಿಯಲ್ಲಿ ನದೀಮ್ ಬೆಳ್ಳಿ ಪದಕದ ಸಾಧನೆ ಮಾಡಿದರು.

ಪುರುಷರ ಭಾರ ಎತ್ತುವ ಸ್ಪರ್ಧೆಯಲ್ಲಿ ತಂಡ ಸಮಗ್ರ ಪ್ರಶಸ್ತಿ ಗಳಿಸಿತು. ಈ ಸಾಧನೆಗೆ ಪ್ರಾಚಾರ್ಯ ಪ್ರೊ.ವಿ.ವರದರಾಜು ಪ್ರೋತ್ಸಾಹ ಹಾಗೂ 6 ತಿಂಗಳ ಹಿಂದೆ ಕಾಲೇಜಿಗೆ ಬಂದ ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಜೆ.­ಶೈಲೇಂದ್ರಕುಮಾರ್ ಕಾರಣ ಎನ್ನುತ್ತಾರೆ ವಿದ್ಯಾರ್ಥಿಗಳು.

ಕಾಲೇಜಿನಲ್ಲಿ ಪ್ರಸ್ತುತ 800 ವಿದ್ಯಾರ್ಥಿ­ಗಳಿದ್ದಾರೆ. ನಾಗರಾಜ್‌ ಮತ್ತು ಶ್ರೀನಿವಾಸ್‌ ಎಂಬ ಇಬ್ಬರು ದೈಹಿಕ ಶಿಕ್ಷಣ ಶಿಕ್ಷಕರು ಕೆಲ ಕಾಲ ನಿಯೋಜನೆ ಮೇರೆಗೆ ಕಾರ್ಯ ನಿರ್ವಹಿಸಿದ್ದು ಬಿಟ್ಟರೆ, ಸುಮಾರು 12 ವರ್ಷಗಳಿಂದ ಕಾಯಂ ದೈಹಿಕ ಶಿಕ್ಷಣ ನಿರ್ದೇಶಕರ ನೇಮಕವೇ ಆಗಿರಲಿಲ್ಲ. 6 ತಿಂಗಳ ಹಿಂದೆ ನೇಮಕಗೊಂಡ ಎಸ್.ಜೆ.­ಶೈಲೇಂದ್ರಕುಮಾರ್ ಭರವಸೆ ಮೂಡಿಸಿದ್ದಾರೆ.

ಸ್ವತಃ ಜಿಮ್ನ್ಯಾಸ್ಟಿಕ್ ಪಟುವಾಗಿರುವ ಎಸ್.ಜೆ.­ಶೈಲೇಂದ್ರಕುಮಾರ್ ರಾಷ್ಟ್ರೀಯ ವಿಶ್ವವಿದ್ಯಾಲಯ­ಗಳ ಸ್ಪರ್ಧೆಯ ಭಾರ ಎತ್ತುವ ಸ್ಪರ್ಧೆ, ದೇಹದಾರ್ಢ್ಯ ವಿಭಾಗದಲ್ಲಿ 2 ಬಾರಿ ಬೆಂಗಳೂರು ವಿಶ್ವವಿದ್ಯಾಲಯ ಪ್ರತಿನಿಧಿಸಿದ್ದಾರೆ. ರಾಜ್ಯಮಟ್ಟದ ಭಾರ ಎತ್ತುವ ಸ್ಪರ್ಧೆಯಲ್ಲಿ 2 ಬೆಳ್ಳಿ, 1 ಚಿನ್ನದ ಪದಕ ಗೆದ್ದಿದ್ದಾರೆ. 1996ರಿಂದ 2001ರ ವರೆಗೆ ಒಟ್ಟು 10 ಚಿನ್ನದ ಪದಕ ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.