ADVERTISEMENT

ಸಾಧನೆಗೆ ಸಂದ ಏಕಲವ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 8:40 IST
Last Updated 22 ಫೆಬ್ರುವರಿ 2012, 8:40 IST

ಐವತ್ತರ ಹರೆಯ. ಬತ್ತದ ಉತ್ಸಾಹ. ಬ್ಯಾಟ್ ಹಿಡಿದು ಅಂಕಣಕ್ಕೆ ಇಳಿದರೆಂದರೆ ಗ್ಯಾಲರಿಯಲ್ಲಿ ಹರ್ಷೋದ್ಘಾರ... ಇಪ್ಪತ್ತೈದು ವರ್ಷ ರಾಜ್ಯದ ಬಾಲ್ ಬ್ಯಾಡ್ಮಿಂಟನ್ ತಂಡದ ಪ್ರತಿನಿಧಿಸಿ. ಹಲವು ಬಾರಿ ಮುನ್ನಡೆಸಿ, ವಿಜಯದ ಹೂಮಾಲೆ ತೊಟ್ಟ ಗೆಲುವಿನ ಸರದಾರ.

ಬಾಲ್ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಇವರ ಹೆಸರು ಕೇಳದವರಿಲ್ಲ. 2003ರಿಂದ 2005ರ ವರೆಗೆ `ಸ್ಟಾರ್ ಆಫ್ ಇಂಡಿಯಾ~ ಹ್ಯಾಟ್ರಿಕ್ ಪ್ರಶಸ್ತಿ ಗಳಿಸಿದ್ದಾರೆ. ಇವರ ಕ್ರೀಡಾ ಸಾಧನೆ ಗಮನಿಸಿದ ರಾಜ್ಯ ಸರ್ಕಾರ 2003ರಲ್ಲಿ ಪ್ರತಿಷ್ಠಿತ `ಏಕಲವ್ಯ~ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಸದ್ದಿಲ್ಲದೆ ಸಾಧನೆಗೈದ ಸಾಧಕ ತುಮಕೂರಿನ ತಮ್ಮಣ್ಣ ಹಾಗೂ ದೇವಮ್ಮ ದಂಪತಿಯ ದ್ವಿತೀಯ ಪುತ್ರ ಟಿ.ಮಹದೇವಗೌಡ.

ಪ್ರೌಢಶಾಲೆ ಹಂತದಲ್ಲೇ ಕ್ರೀಡೆ ಗೀಳು ಹತ್ತಿಸಿಕೊಂಡ ಮಹದೇವಗೌಡರು ಆರಂಭದಲ್ಲೇ ಬಾಲ್ ಬ್ಯಾಡ್ಮಿಂಟನ್ ಆಟಕ್ಕೆ ಮನಸೋತು ಅಲ್ಲೇ ಪಳಗಿದರು. ಆಗ ತುಮಕೂರಿನಲ್ಲಿ ಗಾಂಧಿನಗರ ಡೀಲಕ್ಸ್ ಸ್ಫೋರ್ಟ್ಸ್ ಹಾಗೂ ಮರ್ಚೆಂಟ್ ಕ್ಲಬ್ ಬಾಲ್ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿದ್ದವು.

ಗಾಂಧಿನಗರ ಡೀಲಕ್ಸ್ ಸ್ಫೋರ್ಟ್ಸ್ ಕ್ಲಬ್‌ನಿಂದ ಆಟಕ್ಕಿಳಿದ ಗೌಡರು ಎಚ್‌ಎಂಟಿ ಉದ್ಯೋಗಿ. ಕ್ರೀಡಾ ಕ್ಷೇತ್ರದಲ್ಲಿ ಕಾರ್ಖಾನೆಗೂ ಹೆಸರು ತಂದುಕೊಟ್ಟರು. ಹಿರಿಯ ಆಟಗಾರರಾದ ಕೆ.ಇ.ಬಿ. ಸತ್ಯನಾರಾಯಣ, ವರದರಾಜ್ ಹಾಗೂ ಪ್ರಶಾಂತ್ ಚಲನಚಿತ್ರ ಮಂದಿರದ ಜಿ.ವಿ.ರಾಜಶೇಖರ್ ಮಾರ್ಗದರ್ಶನ, ಪ್ರೋತ್ಸಾಹದಿಂದ ಬೆಳೆದ ಮಹದೇವಗೌಡ 1974ರಿಂದ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.

ಆರಂಭದ ದಿನಗಳಲ್ಲಿ ಇವರ ಆಟ ನೋಡಲು ನೆರೆಯುತ್ತಿದ್ದ ಅಭಿಮಾನಿ ಬಳಗ ಈಗಲೂ ಇದೆ. ಐವತ್ತರ ವಯೋಮಾನದಲ್ಲೂ ಆಟದ ಮೇಲಿನ ಪ್ರೀತಿಗೆ ಕುಂದುಂಟಾಗಿಲ್ಲ. ಪ್ರಸ್ತುತ ಭದ್ರಾವತಿಯ ಸ್ಪುಟ್ನಿಕ್ ತಂಡ ಪ್ರತಿನಿಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.