ತುರುವೇಕೆರೆ: ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸಿಬ್ಬಂದಿಯನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಸಂಸ್ಥೆಯಲ್ಲಿ ಪ್ರತಿದಿನ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಸಿದ್ದಲಿಂಗೇಗೌಡ ಆರೋಪಿಸಿದರು.
ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಮಂಗಳವಾರ ರಾತ್ರಿ ಸಾರಿಗೆ ಸಂಸ್ಥೆ ನೌಕರರ ಬಳಗ ಹಮ್ಮಿಕೊಂಡಿದ್ದ ಕಾನೂನು ಜಾಗೃತಿ ಹಾಗೂ ನಿವೃತ್ತ ಸಿಬ್ಬಂದಿ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸುಮಾರು 80 ಸಾರಿಗೆ ಸಂಸ್ಥೆ ಘಟಕಗಳಿಗೆ ಭೇಟಿದ ಸಂದರ್ಭದಲ್ಲಿ ಸಾರಿಗೆ ಸಿಬ್ಬಂದಿ ನಿಷ್ಠ ಸೌಕರ್ಯಗಳೂ ಇಲ್ಲದೆ ಕಷ್ಟ ಪಡುತ್ತಿರುವುದು ಅರಿವಾಯಿತು ಎಂದರು.
ಡಿಪೊಗಳಲ್ಲಿ ಶುದ್ಧ ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಉತ್ತಮ ಶೌಚಾಲಯ ವ್ಯವಸ್ಥೆ ಕಲ್ಪಿಸಿಲ್ಲ. ಸಣ್ಣಪುಟ್ಟ ತಪ್ಪುಗಳಿಗೆ ದೊಡ್ಡ ಮೊತ್ತದ ದಂಡ ಹಾಕಿ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸಲಾಗುತ್ತಿದೆ. ಸಾರಿಗೆ ಸಿಬ್ಬಂದಿ ಈ ಅನ್ಯಾಯಗಳ ವಿರುದ್ಧ ದನಿ ಎತ್ತಬೇಕು ಎಂದು ಕರೆ ನೀಡಿದರು.
ಸಮಾರಂಭ ಉದ್ಘಾಟಿಸಿದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಪಿ.ಕೆ.ಕಟ್ಟಿಮನಿ ಮಾತನಾಡಿ, ಕಾಯ್ದೆ ಮತ್ತು ಕಾನೂನುಗಳನ್ನು ಎಲ್ಲರೂ ಗೌರವಿಸಿದಾಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಸಾರಿಗೆ ನಿಗಮದ ಆಡಳಿತ ವರ್ಗ ತನ್ನ ಸಂಸ್ಥೆಯ ನೌಕರರಿಗೇ ಘಟಕದಲ್ಲಿ ಸಮಾರಂಭ ನಡೆಸಲು ಅವಕಾಶ ನೀಡದೆ ಘೋರ ಅನ್ಯಾಯ ಎಸಗಿದೆ. ಎಲ್ಲೆಡೆ 6ನೇ ವೇತನ ಆಯೋಗದ ಶಿಫಾರಸ್ಸುಗಳು ಜಾರಿಯಾಗಿವೆ. ಸಾರಿಗೆ ನಿಗಮ 5ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಲೂ ಮೀನಾಮೇಷ ಎಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.