ADVERTISEMENT

ಸಿಂಗಾರಗೊಂಡಿರುವ ಮಧುಗಿರಿ

₹ 200 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 5:34 IST
Last Updated 1 ಜುಲೈ 2017, 5:34 IST
ಅಂಬೇಡ್ಕರ್ ಪ್ರತಿಮೆಗೆ ಬಣ್ಣ ಹಚ್ಚುತ್ತಿರುವುದು
ಅಂಬೇಡ್ಕರ್ ಪ್ರತಿಮೆಗೆ ಬಣ್ಣ ಹಚ್ಚುತ್ತಿರುವುದು   

ಮಧುಗಿರಿ: ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 1ರಂದು ಪಟ್ಟಣಕ್ಕೆ ಬರಲಿದ್ದಾರೆ. ಅವರನ್ನು ಸ್ವಾಗತಿಸಲು ಪಟ್ಟಣವು ಸಿಂಗಾರಗೊಂಡಿದೆ.

ಪಟ್ಟಣ ಸೇರಿದಂತೆ ಕೊಡಿಗೇನಹಳ್ಳಿ ಮಾರ್ಗದ ರಸ್ತೆಗಳನ್ನು ಸ್ವಚ್ಛಗೊಳಿಸಿ ಕೆಲವು ಭಾಗಗಳಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ. ಪಟ್ಟಣದಲ್ಲಿರುವ ರಾಜೀವ್ ಗಾಂಧಿ ಕ್ರೀಡಾಂಗಣ, ಡಬಲ್ ರೋಡ್, ಅಂಬೇಡ್ಕರ್ ಪ್ರತಿಮೆ, ಗೌರಿಬಿದನೂರು ರಸ್ತೆಯ ಬದಿಯಲ್ಲಿ ನೂತನವಾಗಿ ವಿದ್ಯುತ್ ಕಂಬ ಅಳವಡಿಸಿ ಬೆಳಕಿನ ವ್ಯವಸ್ಥೆ, ಮಧುಗಿರಿ ಏಕಶಿಲಾ ಬೆಟ್ಟಕ್ಕೆ ದೀಪದ ವ್ಯವಸ್ಥೆ ಕಲ್ಪಿಸಲಾಗಿದೆ.

ತಾಲ್ಲೂಕಿನ ಕಸಬಾ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ಸಮೀಪ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೊ, ತಾಲ್ಲೂಕು ಪಂಚಾಯಿತಿ ನೂತನ ಕಚೇರಿ, ಲೋಕೋಪಯೋಗಿ ಇಲಾಖೆ ಕಚೇರಿ ಕಟ್ಟಡ, ಪರಿಶಿಷ್ಟ ಜಾತಿ ಮತ್ತು ಪಂಗಡದ ನಿಲಯಗಳು, ತುಮುಲ್ ಘಟಕದ ವತಿಯಿಂದ ನಂದಿನಿ ಕ್ಷೀರ ಭವನ ಹಾಗೂ ಶಾಲಾ ಮಕ್ಕಳಿಗೆ 5 ದಿನ ಹಾಲು ವಿತರಣೆ, ಮಲ್ಲೇನಹಳ್ಳಿಯ ಬಳಿ ಲೋಕೋಪಯೋಗಿ ಇಲಾಖೆ ವತಿಯಿಂದ ಸೇತುವೆ ಹಾಗೂ ರಸ್ತೆ, ವಿವಿಧ ಇಲಾಖೆ ಸವಲತ್ತು ವಿತರಣೆ ಹಾಗೂ ಕಾಮಗಾರಿಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿಕಾಪ್ಟರ್ ಮೂಲಕ ಬರಲಿದ್ದು, ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್ ನಿರ್ಮಿಸಿ, ಸುತ್ತಲು ಮರದ ತುಂಡುಗಳಿಂದ ಭದ್ರಗೊಳಿಸಲಾಗಿದೆ.

ತಾಲ್ಲೂಕಿನ ಕೊಡಿಗೇನಹಳ್ಳಿ ಸರ್ವೋದಯ ಪ್ರೌಢಶಾಲೆ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ, ಡಿಸಿಸಿ ಬ್ಯಾಂಕ್, ವಿವಿಧ ಇಲಾಖೆಗಳ ಒಟ್ಟು ₹ 200 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಸಚಿವರಾದ ಟಿ.ಬಿ.ಜಯಚಂದ್ರ, ರಾಮಲಿಂಗಾರೆಡ್ಡಿ, ಎಂ.ಆರ್.ಸೀತಾರಾಂ, ಆಂಧ್ರದ ಎಪಿಸಿಸಿ ಅಧ್ಯಕ್ಷ ಎನ್.ರಘುವೀರಾರೆಡ್ಡಿ, ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ, ಸಂಸದರಾದ ಮುದ್ದಹನುಮೇಗೌಡ, ಬಿ.ಎನ್.ಚಂದ್ರಪ್ಪ, ಡಿ.ಕೆ.ಸುರೇಶ್, ಕೆಎಸ್ಆರ್‌ಟಿಸಿ ನಿಗಮದ ಅಧ್ಯಕ್ಷ ಗೋಪಾಲ ಪೂಜಾರಿ, ತಿಪಟೂರು ಶಾಸಕ ಕೆ.ಷಡಕ್ಷರಿ, ತುಮಕೂರು ನಗರ ಶಾಸಕ ಡಾ.ರಫೀಕ್ ಅಹಮದ್, ಕೌಶಲ ಮತ್ತು ವೃತ್ತಿ ತರಬೇತಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ, ಮದ್ಯಪಾನ ಸಂಯಮ ಮಂಡಳಿ ಎಚ್.ಸಿ.ರುದ್ರಪ್ಪ, ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.