ADVERTISEMENT

ಸಿ.ಟಿ.ಸ್ಕ್ಯಾನ್, ಎಂ.ಆರ್.ಐ ಸ್ಕ್ಯಾನ್ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 9:21 IST
Last Updated 21 ಅಕ್ಟೋಬರ್ 2017, 9:21 IST

ತುಮಕೂರು: ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸಿ.ಟಿ.ಸ್ಕ್ಯಾನ್ ಮತ್ತು ಎಂ.ಆರ್.ಐ ಸ್ಕ್ಯಾನಿಂಗ್ ಸೌಲಭ್ಯ ಒಂದುವರೆ ತಿಂಗಳಲ್ಲಿ ಸಾರ್ವಜನಿಕರಿಗೆ ಲಭಿಸಲಿದೆ. ಸ್ಕ್ಯಾನಿಂಗ್ ಸೌಲಭ್ಯ ಅವಶ್ಯಕತೆಯ ಬಗ್ಗೆ ಸಾರ್ವಜನಿಕರು ಮತ್ತು ಆಸ್ಪತ್ರೆಯ ವೈದ್ಯರ ಪ್ರಸ್ತಾವನೆಗೆ ಸರ್ಕಾರ ಸ್ಪಂದಿಸಿ ಎರಡೂ ಸೌಲಭ್ಯ ಕಲ್ಪಿಸಲು ತೀರ್ಮಾನಿಸಿದೆ.

ಜಿಲ್ಲಾ ಆಸ್ಪತ್ರೆ ಆವರಣದಲ್ಲಿನ ಪ್ರಾದೇಶಿಕ ಆರೋಗ್ಯ ಪರೀಕ್ಷಾ ಪ್ರಯೋಗಾಲಯ (ಆರ್‌ಡಿಎಲ್) ಕಟ್ಟಡದಲ್ಲಿಯೇ ಸಿ.ಟಿ.ಸ್ಕ್ಯಾನ್ ಮತ್ತು ಎಂ.ಆರ್.ಐ ಸ್ಕ್ಯಾನ್ ವಿಭಾಗಕ್ಕೆ ಪ್ರತ್ಯೇಕ ನವೀಕರಣ ಕಾರ್ಯ ಪ್ರಗತಿಯಲ್ಲಿದ್ದು, 15 ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಸಿ.ಟಿ.ಸ್ಕ್ಯಾನ್ ವಿಭಾಗ ಒಂದು ತಿಂಗಳೊಳಗೆ ಹಾಗೂ ಎಂ.ಆರ್.ಐ ಸ್ಕ್ಯಾನ್ ವಿಭಾಗ ಒಂದು ತಿಂಗಳ ಬಳಿಕ ಪ್ರಾರಂಭವಾಗಲಿವೆ. ಈಗ ಸರ್ಕಾರಿ ಆಸ್ಪತ್ರೆಯಲ್ಲಿ ಸಿ.ಟಿ. ಮತ್ತು ಎಂ.ಆರ್.ಐ. ಸ್ಕ್ಯಾನಿಂಗ್ ಸೌಲಭ್ಯ ಇಲ್ಲದಿರುವುದರಿಂದ ಖಾಸಗಿ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಸ್ಕ್ಯಾನ್ ಮಾಡಿಸಿ ವರದಿ ಪಡೆಯುವುದು ಸಾರ್ವಜನಿಕರಿಗೆ ಅನಿವಾರ್ಯವಾಗಿದೆ.

ADVERTISEMENT

ಸಿ.ಟಿ. ಸ್ಕ್ಯಾನ್‌ಗೆ ₹ 2500, ಎಂ.ಆರ್.ಐ ಸ್ಕ್ಯಾನ್‌ಗೆ ₹ 6000ದವರೆಗೂ ಶುಲ್ಕ ಪಾವತಿಸಬೇಕಾಗುತ್ತದೆ. ಬಡ ಜನರಿಗೆ ಈ ಮೊತ್ತ ಭಾರಿ ಹೊರೆಯಾಗುತ್ತದೆ. ಈಗ ಈ ಸೌಲಭ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಲಭಿಸುವುದರಿಂದ ಖಾಸಗಿ ಸ್ಕ್ಯಾನಿಂಗ್ ಕೇಂದ್ರ ಹುಡುಕಿಕೊಂಡು ಹೋಗುವ ತಾಪತ್ರಯ ದೂರವಾಗಲಿದೆ.

‘ಅಪಘಾತ ಪ್ರಕರಣ, ತುರ್ತು ಚಿಕಿತ್ಸಾ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಬರುವವರಲ್ಲಿ ಸಿ.ಟಿ.ಸ್ಕ್ಯಾನ್, ಎಂ.ಆರ್.ಐ ಸ್ಕ್ಯಾನ್ ಮಾಡಲೇಬೇಕಾದ ಪ್ರಕರಣಗಳಲ್ಲಿ ಸ್ಕ್ಯಾನ್ ಮಾಡಲು ಆ ಸೌಲಭ್ಯ ಇಲ್ಲ. ಇದರಿಂದ ಬೆಂಗಳೂರು ಅಥವಾ ನಗರದ ಬೇರೆ ಕಡೆಗೆ ಕರೆದುಕೊಂಡು ಹೋಗಿ ಸ್ಕ್ಯಾನ್ ಮಾಡಿಸಬೇಕಾಗುತ್ತದೆ. ಇನ್ನು ಇಂತಹ ಸಮಸ್ಯೆ ಇರದು’ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದರು.

‘ ಸರ್ಕಾರವು ರಾಜ್ಯದ 8 ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಒದಗಿಸುತ್ತಿದೆ. ಸರ್ಕಾರ, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ(ಪಿಪಿ‍ಪಿ) ಮಾದರಿಯಲ್ಲಿ ಈ ಸೌಲಭ್ಯ ಲಭಿಸುತ್ತಿದೆ. ಪುಣೆಯ ಕೃಷ್ಣಾ ಡಯಾಗ್ನೋಸ್ಟಿಕ್ ಕಂಪೆನಿಯು ಉಪಕರಣ ಅಳವಡಿಸಿ ನಿರ್ವಹಿಸಲಿದೆ’ ಎಂದು ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ವೀರಭದ್ರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.