ADVERTISEMENT

ಸಿದ್ದರಬೆಟ್ಟ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 51 ಜೋಡಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 8:55 IST
Last Updated 6 ಜೂನ್ 2011, 8:55 IST
ಸಿದ್ದರಬೆಟ್ಟ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 51 ಜೋಡಿ
ಸಿದ್ದರಬೆಟ್ಟ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 51 ಜೋಡಿ   

ಸಿದ್ದರಬೆಟ್ಟ (ಕೊರಟಗೆರೆ/ತೋವಿನಕೆರೆ): ದುಶ್ಚಟ, ಸೋಮಾರಿತನ ಬಿಟ್ಟಾಗ ಮಾತ್ರ ದೇಶ ಹಾಗೂ ವೈಯಕ್ತಿಕ ಅಭಿವೃದ್ಧಿ ಸಾಧ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.

ಸಿದ್ದರಬೆಟ್ಟದ ರಂಭಾಪುರಿ ಶಾಖಾ ಮಠದಲ್ಲಿ ಭಾನುವಾರ ನಡೆದ ಜಗದ್ಗುರು ರೇಣುಕಾಚಾರ್ಯ ಹಾಗೂ ಬಸವ ಜಯಂತ್ಯುತ್ಸವ ಮತ್ತು ಮಠದ 5ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನ ಪರಾವಲಂಬಿಗಳಾಗದೆ, ತಮ್ಮನ್ನೇ ಅವಲೋಕನ ಮಾಡಿಕೊಂಡು ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತರಬೇಕು ಎಂದು ಸಲಹೆ ನೀಡಿದರು.

ಬದಲಾದ ಆಧುನಿಕ ಜಗತ್ತಿನಲ್ಲಿ ಬಸವಣ್ಣನವರ ಆದರ್ಶ ಅವಶ್ಯಕತೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ, ಶಾಸಕ ಡಾ.ಜಿ.ಪರಮೆಶ್ವರ್ ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಯಡಿಯೂರಪ್ಪ ಸಿದ್ದರಬೆಟ್ಟದ ಅಭಿವೃದ್ಧಿಗೆ ರೂ.10 ಕೋಟಿ ನೀಡುವ ಭರವಸೆ ನೀಡಿದ್ದರು. ಆದರೂ ಈವರೆಗೆ ನೀಡಿಲ್ಲ. ಆದಷ್ಟು ಬೇಗ ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಬೇಕು ಎಂದು ಕೋರಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಂಸದ ಜಿ.ಎಸ್.ಬಸವರಾಜು, ಅಬಕಾರಿ ಸಚಿವ ರೇಣುಕಾಚಾರ್ಯ, ಪಟ್ಟನಾಯಕನಹಳ್ಳಿ ನಂಜವಧೂತ ಸ್ವಾಮೀಜಿ ಮಾತನಾಡಿ, ಬಾಬಾ ರಾಮ್‌ದೇವ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ, ಪರಮೇಶ್ವರ್ ಅವರ ಸ್ಪಷ್ಟನೆ ಕೇಳಿದರು.

ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ, ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಎಂ.ಆರ್.ಹುಲಿನಾಯ್ಕರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ 51 ಜೋಡಿಯ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿತ್ತು. 20 ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತಾರು ಪಾಲ್ಗೊಂಡಿದ್ದರು.

ಮಾರ್ಕೆಟಿಂಗ್ ಅಧ್ಯಕ್ಷ ಜಿ.ಮರಿಸ್ವಾಮಿ, ಮಾಜಿ ಶಾಸಕ ಸಿ.ವೀರಭದ್ರಯ್ಯ, ಗಂಗಹನುಮಯ್ಯ, ಜಿ.ಪಂ.ಸದಸ್ಯರಾದ ಟಿ.ಡಿ.ಪ್ರಸನ್ನಕುಮಾರ್, ಸುಧಾಕರ್‌ಲಾಲ್, ಪ್ರೇಮಾ ಮಹಾಲಿಂಗಪ್ಪ, ದಾಕ್ಷಾಯಿಣಿ ರಾಜಣ್ಣ, ತಾ.ಪಂ. ಅಧ್ಯಕ್ಷೆ ಸುಧಾ ಹನುಮಂತರಾಯಪ್ಪ, ಸದಸ್ಯ ಜಿ.ಎಲ್.ಹನುಮಂತರಾಯಪ್ಪ, ವಕೀಲ ಪಂಚಾಕ್ಷರಯ್ಯ ಉಪಸ್ಥಿತರಿದ್ದರು.

ಬಂಧನಕ್ಕೆ ಖಂಡನೆ
ಉಪವಾಸ ನಿರತ ಬಾಬಾ ರಾಮ್‌ದೇವ್ ಅವರನ್ನು ರಾತ್ರೋರಾತ್ರಿ ಬಂಧಿಸಿರುವುದಕ್ಕೆ ಅಬಕಾರಿ ಸಚಿವ ರೇಣುಕಾಚಾರ್ಯ ಖಂಡಿಸಿದರು.

ತಾಲ್ಲೂಕಿನ ಸಿದ್ದರಬೆಟ್ಟದ ವಾರ್ಷಿಕೋತ್ಸವ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕಪ್ಪುಹಣ ಬಹುತೇಕವಾಗಿ ಕಾಂಗ್ರೆಸ್ ಪಕ್ಷದವರದ್ದೇ ಆಗಿದೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿರುವ ಬಾಬಾ ರಾಮ್‌ದೇವ್ ಪ್ರತಿಭಟನೆಗೆ ರಾಜಕೀಯ ಬಣ್ಣ ಹಚ್ಚಬಾರದು ಎಂದರು.

ಕಾಂಗ್ರೆಸ್‌ನ ಮುಖವಾಡ ಜನ ಸಾಮಾನ್ಯರಿಗೆ ಈಗ ಗೊತ್ತಾಗಿದ್ದು, ಇದರಿಂದ ಕಾಂಗ್ರೆಸ್ ಭ್ರಷ್ಟಾಚಾರ ಬಯಲಾಗಿದೆ. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ ಎನ್ನುವುದನ್ನು ನಿರೂಪಿಸಿದಂತಾಗಿದೆ. ಜೆಡಿಎಸ್-ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಈ ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖ ಇದ್ದಂತೆ ಎಂದರು.
 

`ಕೇಂದ್ರ ಕಾನೂನು ಬದ್ಧ ಕರ್ತವ್ಯ~ 
ತೋವಿನಕೆರೆ/ಕೊರಟಗೆರೆ: `ಬಾಬಾ ರಾಮ್‌ದೇವ್ ಬಂಧನ ಕೇಂದ್ರ ಸರ್ಕಾರ ನಿರ್ವಹಿಸಿದ ಕಾನೂನು ಬದ್ಧ ಕರ್ತವ್ಯ~ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.

ಕೊರಟಗೆರೆ ತಾಲ್ಲೂಕಿನ ಸಿದ್ದರಬೆಟ್ಟದಲ್ಲಿ ಭಾನುವಾರ ನಡೆದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಕಣ್ಣು, ಕಣ್ಣಿನ ಕೆಲಸವನ್ನು, ಮೂಗು ಮೂಗಿನ ಕೆಲಸ ನಿರ್ವಹಿಸಬೇಕು. ಅದು ಬಿಟ್ಟು ಬೇರೆ ಕೆಲಸ ನಿರ್ವಹಿಸಬಾರದು ಎಂದು ಮಾರ್ಮಿಕವಾಗಿ ನುಡಿದರು.

ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಸಭಾ ಅಧ್ಯಕ್ಷರು ರಾಜೀನಾಮೆ ನೀಡುವ ತನಕ ವಿಧಾನಸಭೆ ಅಧಿವೇಶನ ಬಹಿಷ್ಕರಿಸುವುದಾಗಿ ತಿಳಿಸಿದರು.

ಕಲಾಪ ಬಹಿಷ್ಕಾರ ಕುರಿತು ಮುಖ್ಯಮಂತ್ರಿಗಳು ಪ್ರತಿಪಕ್ಷಗಳ ಜತೆ ಮಾತುಕತೆ ನಡೆಸಿ ವಿವಾದ ಬಗೆಹರಿಸಬಹುದಿತ್ತು. ಆದರೆ ಆ ಆಸಕ್ತಿ, ಅಗತ್ಯ ಅವರಲ್ಲಿ ಕಂಡುಬರುತ್ತಿಲ್ಲ ಎಂದು ಆರೋಪಿಸಿದರು.

ಇನ್ನಾದರೂ ವಿರೋಧ ಪಕ್ಷದ ಶಾಸಕರನ್ನು ಶತ್ರುಗಳಂತೆ ನೋಡುವುದನ್ನು ಬಿಟ್ಟು ವಿಶ್ವಾಸಕ್ಕೆ ತೆಗೆದುಕೊಳ್ಳಲಿ ಎಂದು ಸಲಹೆ ನೀಡಿದರು.

ಅಬಕಾರಿ ಸಚಿವ ರೇಣುಕಾಚಾರ್ಯ, ಸಂಸದ ಜಿ.ಎಸ್.ಬಸವರಾಜು ಧಾರ್ಮಿಕ ಸಭೆಯಲ್ಲೆ ಯೋಗ ಗುರುವಿನ ಬಂಧನವನ್ನು ಖಂಡಿಸಿದರು. ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ, ರಾಮ್‌ದೇವ್ ಬಂಧನ ಕುರಿತಂತೆ ಕೆಪಿಸಿಸಿ ಅಧ್ಯಕ್ಷರು ವೇದಿಕೆಯಲ್ಲೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT