ADVERTISEMENT

ಸ್ಮಶಾನ ತೆರವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 7:41 IST
Last Updated 10 ಮಾರ್ಚ್ 2018, 7:41 IST

ಚಿಕ್ಕನಾಯಕನಹಳ್ಳಿ: ‘ತಾಲ್ಲೂಕಿನಲ್ಲಿರುವ ಅಲೆಮಾರಿಗಳನ್ನು ಒಕ್ಕಲೆಬ್ಬಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಲೆಮಾರಿಗಳಿಗೆ ಸವಲತ್ತುಗಳನ್ನು ನೀಡುವ ವಿಚಾರದಲ್ಲಿ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ’ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ತಾಲ್ಲೂಕು ಅಧ್ಯಕ್ಷ ಹುಳಿಯಾರ್ ರಾಜಪ್ಪ ಆರೋಪಿಸಿದ್ದಾರೆ.

ತಾಲ್ಲೂಕಿನ ಹನುಮಂತಪುರ ಅಲೆಮಾರಿ ಹಾಗೂ ಸಿಳ್ಳೇಕ್ಯಾತ ಜನಾಂಗದವರು 5 ದಶಕಗಳಿಂದ ಪೂರ್ವಜರನ್ನು ಹುಳುತ್ತಾ ಬಂದಿದ್ದ ಅಲೆಮಾರಿಗಳ ಸ್ಮಶಾನದ ಜಾಗವನ್ನು ಖಾಸಗಿಯವರು ಕಬಳಿಸಿದ್ದು ಸ್ಮಶಾನ ತೆರವುಗೊಳಿಸಿ ಕೊಡುವಂತೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಅಲೆಮಾರಿ ಬುಡಕಟ್ಟು ಮಹಾಸಭಾದ ಅಧ್ಯಕ್ಷ ರಾಜಪ್ಪ ತಹಶೀಲ್ದಾರ್ ಶಿವಲಿಂಗಮೂರ್ತಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ ಕಳೆದ 25 ವರ್ಷಗಳಿಂದ ಜಾಗಕ್ಕಾಗಿ ಮನವಿ ಸಲ್ಲಿಸಿದ್ದರು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದರು.

ADVERTISEMENT

ಮುಖಂಡರಾದ ಅಂದಾನಪ್ಪ, ಅಂದಾನಪ್ಪ, ರಾಜಣ್ಣ, ಚೌಡಯ್ಯ, ವರದರಾಜು, ಬಾಲರಾಜು, ಮಂಜಣ್ಣ ಇದ್ದರು.

ನಿಕೃಷ್ಟ ಬದುಕು: ‘ತಾಲ್ಲೂಕಿನ ಅಲೆಮಾರಿ ಪಂಗಡಗಳ 7000ಕ್ಕೂ ಹೆಚ್ಚು ಅಲೆಮಾರಿಗಳು ಅತ್ಯಂತ ನಿಕೃಷ್ಟ ಜೀವನ ನಡೆಸುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ಸ್ಮಶಾನದ ಪಕ್ಕ, ತೋಪುಗಳಲ್ಲಿ, ಕೆರೆ ಅಂಗಳದಲ್ಲಿ ಡೇರೆ ಗುಡಿಸಲುಗಳನ್ನು ಹಾಕಿಕೊಂಡು ವಾಸ ಮಾಡುತ್ತಿದ್ದಾರೆ ಎಂದು ಗೋಪಿ ತಿಳಿಸಿದರು.

‘ಹೇರ್‌ಪಿನ್, ಕೂದಲು ಹಾಗೂ ಸಣ್ಣಪುಟ್ಟ ಆಟಿಕೆ ಸಾಮಾನುಗಳನ್ನು ಮಾರಿಕೊಂಡು ಬದುಕು ನಡೆಸುತ್ತಿದ್ದಾರೆ. ಜತೆಗೆ ತೊಗಲುಗೊಂಬೆ, ಬೀದಿ ಬದಿಯ ಸರ್ಕಸ್ ಮಾಡಿಕೊಂಡು ಜೀವನ ಸವೆಸುತ್ತಿದ್ದಾರೆ’ ಎಂದು ತಿಳಿಸಿದರು.

‘ಕನಿಷ್ಠ ಮೂಲ ಸೌಕರ್ಯಗಳಾದ ವಸತಿ, ಸೂರು, ಕುಡಿಯುವ ನೀರು, ಬೀದಿ ದೀಪಗಳಿಲ್ಲದೆ ಬದುಕುತ್ತಿದ್ದಾರೆ’ ಎಂದು ಆರೋಪಿಸಿದರು.
***
ನಮ್ಮ ಪೂರ್ವಜರ ಆತ್ಮಗಳು ಸದರಿ ಸ್ಮಶಾನದಲ್ಲಿ ಚಿರಶಾಂತಿ ಪಡೆದಿವೆ. ಏಕಾಏಕಿ ಗೋರಿಗಳನ್ನು ಕಿತ್ತು ಹಾಕಿರುವುದು ನೋವು ತಂದಿದೆ.
  –ಚೌಡಯ್ಯ, ಅಲೆಮಾರಿ, ಹನುಮಂತಪುರ
**
ಹನುಮಂತನಹಳ್ಳಿ ಶಿಳ್ಳೇಕ್ಯಾತರ ನೆಲೆಗೆ ತಕ್ಷಣ ಭೇಟಿ ನೀಡುತ್ತೇನೆ. ಕಾನೂನಿನ ಚೌಕಟ್ಟಿನಲ್ಲಿ ಆಗಿರುವ ಅನ್ಯಾಯ ಸರಿಪಡಿಸುವ ಪ್ರಯತ್ನ ಮಾಡುತ್ತೇನೆ.
– ಶಿವಲಿಂಗಮೂರ್ತಿ, ತಹಶಿಲ್ದಾರ್, ಚಿಕ್ಕನಾಯಕನಹಳ್ಳಿ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.