ADVERTISEMENT

ಹದ ಮಳೆ; ಚಿಗುರಿದ ಹೆಸರು

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 11:05 IST
Last Updated 16 ಜೂನ್ 2011, 11:05 IST
ಹದ ಮಳೆ; ಚಿಗುರಿದ ಹೆಸರು
ಹದ ಮಳೆ; ಚಿಗುರಿದ ಹೆಸರು   

ಚಿಕ್ಕನಾಯಕನಹಳ್ಳಿ:  ತಾಲ್ಲೂಕಿನಲ್ಲಿ ಮಳೆ ಇಲ್ಲದೆ ಒಣಗಿ ಹೋಗುತ್ತಿದ್ದ ಹೆಸರು ಬೆಳೆ ಕೆಲವು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಜೀವ ಕಳೆಯೊಂದಿಗೆ ನಳನಳಿಸುತ್ತಿದೆ.

ಏಪ್ರಿಲ್‌ನಲ್ಲಿ ತ್ಲ್ಲಾಲೂಕಿನ ಕೆಲವೆಡೆ ಬಿದ್ದ ಮಳೆಯಿಂದ ಉತ್ಸಾಹಭರಿತರಾದ  ರೈತರು ಹೆಸರು ಬೆಳೆ ಬಿತ್ತನೆ ಮಾಡಿದ್ದರು. ಭರಣಿ ಮಳೆ ನಿರೀಕ್ಷೆಗಿಂತ ಕಡಿಮೆಯಾದ ಕಾರಣ ತಾಲ್ಲೂಕಿನಾದ್ಯಂತ ಕೇವಲ 3450 ಹೆಕ್ಟೇರ್‌ನಲ್ಲಿ  ಮಾತ್ರ ಹೆಸರು ಬಿತ್ತನೆಯಾಗಿತ್ತು. ಕಳೆದ ವರ್ಷದ 5283 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿತ್ತು.

ಮಳೆಯ ಕಣ್ಣಾಮುಚ್ಚಾಲೆ ಆಟದಲ್ಲಿ ಹೆಸರು ಬೆಳೆ ಬಿತ್ತನೆಯು ಏಪ್ರಿಲ್ ತಿಂಗಳಲ್ಲಿ ತಾಲ್ಲೂಕಿನಾದ್ಯಂತ ಎರಡು ಹಂತದಲ್ಲಿ ಮಾಡಲಾಗಿತ್ತು. ತಾಲ್ಲೂಕಿನ ಶೆಟ್ಟಿಕೆರೆ ಹಾಗೂ ಜೆ.ಸಿ. ಪುರ ಪಂಚಾಯತಿ ವ್ಯಾಪ್ತಿಯಲ್ಲಿ ಬೆಳೆ ಮುಂಚಿತವಾಗಿ ಬಿತ್ತನೆ ಮಾಡಲಾಗಿತ್ತು. ಮಳೆ ಕೊರತೆಯ ಕಾರಣ ಒಣಗುವ ಅಪಾಯದಲ್ಲಿದ್ದತ್ತು.

ಕಾಯಿ ಬಲಿಯುವ ಕ್ರಿಯೆಗಾಗಿ ಮಳೆಯನ್ನು ನಿರೀಕ್ಷಿಸುತ್ತಿದ್ದ  ರೈತರಿಗೆ ಈಗ ಬೀಳುತ್ತಿರುವ ಮಳೆ ಹರ್ಷ ನೀಡಿದೆ. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.  ಶೇ.10 ರಷ್ಟು ಬೆಳೆಗಳಿಗೆ ನಂಜು ರೋಗ ತಾಗಿದೆ. 

ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಔಷಧ ಲಭ್ಯವಿದ್ದು  ರೈತರು ಬೆಳೆಗೆ ಸಿಂಪಡಿಸಬೇಕು. ಹೆಚ್ಚಿನ ವಿವರಗಳಿಗೆ  ಆಯಾ ಕೃಷಿ ಕೇಂದ್ರಗಳನ್ನು ಸಂಪರ್ಕಿಸುವಂತೆ ಸಹಾಯಕ ಕೃಷಿ ನಿರ್ದೇಶಕ ಬಿ.ಎನ್.ರಂಗಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.