ADVERTISEMENT

ಹರಕೆ ತೀರಿಸಲು ತೆರಳುವ ಭಕ್ತರ ಪರದಾಟ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 7:32 IST
Last Updated 22 ಅಕ್ಟೋಬರ್ 2017, 7:32 IST
ಆಟೊ ಕೆಸರಿನಲ್ಲಿ ಸಿಲುಕಿರುವುದು
ಆಟೊ ಕೆಸರಿನಲ್ಲಿ ಸಿಲುಕಿರುವುದು   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಪುಣ್ಯಸ್ಥಳಗಳಲ್ಲಿ ಒಂದಾದ ಅಕ್ನಾರಹಳ್ಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಸ್ಥಳಕ್ಕೆ ಬಂದು ಗಂಗಮ್ಮನ ಪೂಜೆ ನೆರವೇರಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಭಕ್ತ ಸಮೂಹದಲ್ಲಿ ಇದೆ.

ಈಚೆಗೆ ಸುರಿದ ಮಳೆಯಿಂದ ಹಳ್ಳದಲ್ಲಿ ನೀರು ಬಂದಿದ್ದು, ಪೂಜೆ ಸಲ್ಲಿಸಲು ನವ ವಿವಾಹಿತರು, ಸಂತಾನಫಲಕ್ಕಾಗಿ ಹರಕೆ ಹೊತ್ತವರು, ಒಕ್ಕಲ ಮಕ್ಕಳು ಪೂಜೆ ಸಲ್ಲಿಸಲು ಬರುತ್ತಿದ್ದಾರೆ

ತಾಲ್ಲೂಕಿನ ಮಾಳಿಗೆಹಳ್ಳಿ, ಬ್ಯಾಲದಕೆರೆ ಮಾರ್ಗ 7 ಕಿ.ಮೀ ಸಾಗಿದರೆ ಈ ಸ್ಥಳ ಸಿಗುತ್ತದೆ. ಇನ್ನೊಂದು ಮಾರ್ಗ ನಾಗತಿಕೆರೆ ಏರಿಯ ಮೇಲೆ 4 ಕಿ.ಮೀ ಸಾಗಬೇಕು. ಈ ಎರಡೂ ಮಾರ್ಗ ಬಿಟ್ಟರೆ ಬೇರೆ ಇಲ್ಲ. ಆದರೆ, ಇವೆರಡೂ ಹಾಳಾಗಿರುವುದು ಸಂಚಾರಕ್ಕೆ ಅಡಚಣೆಯಾಗಿದೆ. ನಡೆದುಕೊಂಡೇ ಸಾಗಬೇಕಾದ ಪರಿಸ್ಥಿತಿ ಬಂದಿದೆ ಎಂದು ಸಾರ್ವಜನಿಕರು ಸಮಸ್ಯೆ ವಿವರಿಸುತ್ತಾರೆ.

ಅಕ್ನಾರಹಳ್ಳ ಕುರುಚಲು ಕಾಡಿನ ಮಧ್ಯೆ ಇರುವುದರಿಂದ ಕರಡಿ, ಚಿರತೆಯಂತಹ ಕಾಡು ಪ್ರಾಣಿಗಳ ಭಯ ಇದೆ. ಸಂಬಂಧಪಟ್ಟ ಇಲಾಖೆಯವರು ಬೇಗ ರಸ್ತೆ ದುರಸ್ತಿ ಪಡಿಸಿ ಕೊಟ್ಟರೆ ಅನುಕೂಲವಾಗುತ್ತದೆ. ಅಲ್ಲದೇ ನೀರು, ತಂಗುದಾಣದಂತಹ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಇಲ್ಲಿಗೆ ಬಂದ ಭಕ್ತರು ಮನವಿ ಮಾಡುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.