ADVERTISEMENT

ಹುಳಿಯಾರಿಗೆ ಬಂದ ವೆಂಕಟರಮಣ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 6:08 IST
Last Updated 29 ಮಾರ್ಚ್ 2018, 6:08 IST
ತಿರುಪತಿ ದೇವಸ್ಥಾನದಿಂದ ಹುಳಿಯಾರಿಗೆ ಬಂದಿಳಿದ ವೆಂಕಟರಮಣ ಸ್ವಾಮಿ ಮೂರ್ತಿಯನ್ನು ಜಲಾಧಿವಾಸಕ್ಕೆ ಅಣಿಮಾಡಲಾಯಿತು
ತಿರುಪತಿ ದೇವಸ್ಥಾನದಿಂದ ಹುಳಿಯಾರಿಗೆ ಬಂದಿಳಿದ ವೆಂಕಟರಮಣ ಸ್ವಾಮಿ ಮೂರ್ತಿಯನ್ನು ಜಲಾಧಿವಾಸಕ್ಕೆ ಅಣಿಮಾಡಲಾಯಿತು   

ಹುಳಿಯಾರು: ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಶ್ರೀವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಪ್ರತಿಷ್ಠಾಪಿಸುವ ಸಲುವಾಗಿ ತಿರುಪತಿ ತಿರುಮಲದಿಂದ ತರಲಾದ ವಿಗ್ರಹಗಳನ್ನು ಶಾಸ್ತ್ರೋಕ್ತವಾಗಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ಬುಧವಾರ ಬರಮಾಡಿಕೊಳ್ಳಲಾಯಿತು.

ಸೂರಗನಹಳ್ಳಿ ರಸ್ತೆಯಲ್ಲಿನ ಜಿ.ಎಸ್.ವಿ ಲೇಔಟ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಜಿ.ಎಸ್.ವೆಂಕಟಾಚಲಪತಿ ಶೆಟ್ಟಿಯವರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ. ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಇಲ್ಲಿನ ಟ್ರಸ್ಟ್‌ನ ಕೋರಿಕೆ ಮೇರೆಗೆ ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ವತಿಯಿಂದ ಪದ್ಮಾವತಿ ಹಾಗೂ ವೆಂಕಟೇಶ್ವರ ಸ್ವಾಮಿ ಅವರ ವಿಗ್ರಹವನ್ನು ಉಚಿತವಾಗಿ ನೀಡಿದ್ದರು.

ತಿರುಪತಿಯಿಂದ ತರಲಾದ ವಿಗ್ರಹಕ್ಕೆ ದೇವಸ್ಥಾನದ ಆವರಣದಲ್ಲಿ ಅರ್ಚಕ ರಾಮಚಂದ್ರ ಭಟ್ ಷೋಡಶೋಪಚಾರ ಪೂಜಾ ವಿಧಿಗಳನ್ನು ನೆರವೇರಿಸಿ ಜಲಾಧಿವಾಸಕ್ಕೆ ಅಣಿ ಮಾಡಿದರು. ಅಂಜನಾದ್ರಿ ಭಜನಾ ಮಂಡಳಿಯ ಸದಸ್ಯರುಗಳು ವೆಂಕಟರಮಣನ ಸ್ತುತಿಯನ್ನು ಭಜಿಸಿದರು.

ADVERTISEMENT

ಜಿ.ಎಸ್.ವೆಂಕಟಾಚಲಪತಿ ಶೆಟ್ಟಿಯವರು ಮಾತನಾಡಿ, ‘ತಮ್ಮಲ್ಲಿ ಚಿಕ್ಕಂದಿನಿಂದಲೂ ಮನೆಮಾಡಿದ್ದ ಧಾರ್ಮಿಕ ಮನೋಭಾವದಿಂದಾಗಿ ಇಂದು ಬೃಹತ್ ದೇವಸ್ಥಾನ ನಿರ್ಮಿಸಲಾಗುತ್ತಿದ್ದು ಬಹುತೇಕ ಕಾಮಗಾರಿಗಳು ಈಗಾಗಲೇ ಮುಗಿದಿದ್ದು, ಗೋಪುರ ನಿರ್ಮಾಣ ವಾರದಲ್ಲಿ ಆರಂಭವಾಗಲಿದೆ. ದೇವಸ್ಥಾನದಲ್ಲಿ ಒಟ್ಟು ಹದಿನಾಲ್ಕು ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಇನ್ನು ಐದಾರು ತಿಂಗಳಿನಲ್ಲಿ ದೇವಸ್ಥಾನ ಲೋಕಾರ್ಪಣೆ ಮಾಡಲಾಗುವುದು’ ಎಂದರು.

ಪೂಜಾ ಕಾರ್ಯದಲ್ಲಿ ಜಿ.ಎಸ್.ಸತ್ಯನಾರಾಯಣ ಶೆಟ್ರು, ರಂಗನಾಥ್ ಶೆಟ್ರು, ಶ್ರೀನಿವಾಸ ಬಾಬು, ಕಿಟ್ಟಪ್ಪ, ತಮ್ಮಯ್ಯ, ಬಡಗಿ ರಾಮಣ್ಣ, ಪ್ರವೀಣ್, ಸುಬ್ರಹ್ಮಣ್ಯ, ರಮಾಕಾಂತ್, ಪ್ರೇಮಕ್ಕ, ಲಕ್ಷ್ಮಿರಾಜು, ನಳಿನಾ ರಮಾಕಾಂತ್, ಸುಜಾತಾ, ಜ್ಯೋತಿ ಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.