ADVERTISEMENT

ಹೆಚ್ಚುವರಿ ಶುಲ್ಕ: ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 10:22 IST
Last Updated 13 ಜೂನ್ 2018, 10:22 IST

ಪಾವಗಡ: ಹೆಚ್ಚು ವಂತಿಗೆ ವಸೂಲಿ ಮಾಡುವ, ಕಾನೂನು ಬಾಹಿರವಾಗಿ ಶಾಲೆಯಲ್ಲಿಯೇ ಪುಸ್ತಕ, ಸಮವಸ್ತ್ರ ಮಾರಾಟ ಮಾಡುವ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ನಮ್ಮ ಹಕ್ಕು, ಹೆಲ್ಪ್ ಸೊಸೈಟಿ ಪದಾಧಿಕಾರಿಗಳು ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಪುಸ್ತಗಳು, ನೋಟ್ ಪುಸ್ತಕದ ಮೇಲೆ ಮುದ್ರಿಸಿರುವುದಕ್ಕಿಂತ ಹೆಚ್ಚಿನ ಹಣವನ್ನು ಶಾಲೆಗಳಲ್ಲಿ ವಸೂಲಿ ಮಾಡಲಾಗುತ್ತಿದೆ. ತಮಗೆ ಇಷ್ಟ ಬಂದಂತೆ ಶಾಲಾ ವಾಹನಗಳ ಶುಲ್ಕವನ್ನು ಪೋಷಕರಿಂದ ಸುಲಿಯಲಾಗುತ್ತಿದೆ ಎಂದು ಪದಾಧಿಕಾರಿಗಳು ಆರೋಪಿಸಿದರು.

ಈಚೆಗೆ ಜಿಲ್ಲಾಧಿಕಾರಿ, ಹೆಚ್ಚಿನ ಶುಲ್ಕ ವಸೂಲಿ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಆದರೆ ತಾಲ್ಲೂಕಿನಲ್ಲಿ ಜಿಲ್ಲಾಧಿಕಾರಿ ಮಾತಿಗೂ ಬೆಲೆ ಇಲ್ಲ. ಕಾನೂನು ಬಾಹಿರವಾಗಿ ಬಹುತೇಕ ಶಾಲೆಗಳಲ್ಲಿ ಶುಲ್ಕ ವಸೂಲಿ ದಂಧೆ ಮುಂದುವರಿಸಿವೆ ಎಂದು ದೂರಿದರು.

ADVERTISEMENT

ಪಟ್ಟಣ ಹಾಗೂ ತಾಲ್ಲೂಕಿನ ಖಾಸಗಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಶುಲ್ಕ ಮಾತ್ರ ವಸೂಲಿ ಮಾಡಬೇಕು. ಆರ್.ಟಿ.ಇ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ವಸೂಲಿ ಮಾಡಬಾರದು ಎಂದು ಒತ್ತಾಯಿಸಿದರು.

ನಮ್ಮ ಹಕ್ಕು ತಾಲ್ಲೂಕು ಘಟಕದ ಅಧ್ಯಕ್ಷ ಗಿರಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶುಲು, ಸಂಘಟನಾ ಕಾರ್ಯದರ್ಶಿ ಕಮಲ್, ಹೆಲ್ಫ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಕಾರ್ತಿಕ್, ಗಜೇಂದ್ರ, ತಿಮ್ಮರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.