ADVERTISEMENT

ಹೆಸರು ಗಿಡಕ್ಕೆ ಕೆಂಪು ಕಂಬಳಿಹುಳು ಬಾಧೆ; ರೈತರ ಆತಂಕ

​ಪ್ರಜಾವಾಣಿ ವಾರ್ತೆ
Published 10 ಜೂನ್ 2017, 9:31 IST
Last Updated 10 ಜೂನ್ 2017, 9:31 IST
ತೊರೆಸೂರಗೊಂಡನಹಳ್ಳಿ ಗ್ರಾಮದ ಬಳಿ ಕೆಂಪು ಕಂಬಳಿಹುಳು ಬಾಧೆಗೆ ತುತ್ತಾಗಿರುವ ಹೆಸರಿನ ಗಿಡಗಳು
ತೊರೆಸೂರಗೊಂಡನಹಳ್ಳಿ ಗ್ರಾಮದ ಬಳಿ ಕೆಂಪು ಕಂಬಳಿಹುಳು ಬಾಧೆಗೆ ತುತ್ತಾಗಿರುವ ಹೆಸರಿನ ಗಿಡಗಳು   

ಹುಳಿಯಾರು: ಹೋಬಳಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಪೂರ್ವ ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆ ಹೆಸರಿಗೆ ಕೆಂಪು ಕಂಬಳಿಹುಳು ಬಾಧೆ ತಗುಲಿದೆ. ಇದರಿಂದ ರೈತರು ಆತಂಕಗೊಂಡಿದ್ದಾರೆ.

ಕೆಲವು ಗ್ರಾಮಗಳಲ್ಲಿ ಮಳೆ ಹದವಾಗಿ ಬಿದ್ದು ಪರಿಣಾಮ ಹೆಸರು, ಅಲಸಂದೆ ಸೇರಿದಂತೆ ವಿವಿಧ ಮುಂಗಾರು ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಯಳನಡು, ಕೆಂಕೆರೆ, ಹಂದನಕೆರೆ, ತೊರೆಸೂರುಗೊಂಡನಹಳ್ಳಿ, ನಂದಿಹಳ್ಳಿ ಗ್ರಾಮಗಳಲ್ಲಿ ಹೆಸರು ಗಿಡಗಳು ಹುಲುಸಾಗಿ ಬೆಳೆದಿವೆ. ಆದರೆ ಗಿಡಗಳ ಮೊಗ್ಗುಗಳನ್ನು ಕೆಂಪು ಕಂಬಳಿಹುಳಗಳು ತಿನ್ನಲು ಆರಂಭಿಸಿವೆ. ಹೊಲದಿಂದ ಹೊಲಕ್ಕೆ ಪಸರಿಸುತ್ತಿವೆ. ರೈತರು  ಹುಳುಗಳ ನಾಶ ಪಡಿಸಲು ಮುಂದಾಗಿದ್ದರೂ ಇವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯನ್ನು ರೈತರು ಅನುಭವಿಸುತ್ತಿದ್ದಾರೆ.

‘ಹುಳು ಕಾಟ ಹೆಚ್ಚಿದೆ. ರಾಸುಗಳಿಗೆ ಮೇವಿಲ್ಲದ ಕಾರಣ ದನಗಳನ್ನು ಬಿಟ್ಟು ಮೇಯಿಸುವ ಮುಂದಾಗಿದ್ದೇನೆ’ ಎನ್ನುತ್ತಾರೆ ತೊತೆಸೂರಗೊಂಡನಹಳ್ಳಿಯ ರೈತ ಮೋಹನ್ ಕುಮಾರ್.

ADVERTISEMENT

**

ಹುಳು ಹತೋಟಿಗೆ ಕ್ರಮಗಳು

ಕೃಷಿ ಇಲಾಖೆ ಅಧಿಕಾರಿಗಳು ಕೆಂಪು ಕಂಬಳಿಹುಳುಗಳ ನಿಯಂತ್ರಣಕ್ಕೆ ಈ ಅಂಶಗಳನ್ನು ಸೂಚಿಸಿದ್ದಾರೆ. ಹೆಸರು ಗಿಡದ ಹೊಲದಲ್ಲಿ ಮಂಡಕ್ಕಿ ಅಥವಾ ಅನ್ನ ಚೆಲ್ಲಿ ಪಕ್ಷಿಗಳನ್ನು ಆಕರ್ಷಿಸಿ ಹುಳುಗಳನ್ನು ತಿನ್ನುವಂತೆ ಮಾಡುವುದು. ಹುಳುಗಳ ಗಾತ್ರ ಕಡಿಮೆ ಇದ್ದರೆ ಕ್ವಿನಾಲ್ ಫಾಸ್ ಅಥವಾ ಕ್ಲೋರೊಪೈರಿಫಾಸ್ ಸಿಂಪಡಿಸುವುದು. ಟೆನ್ವರಲೇಟ್ ರಾಸಾಯನಿಕ ಔಷಧಿ ಸಿಂಪಡಣೆ. ಕೈಯಿಂದ ಹುಳುಗಳನ್ನು ನಾಶಪಡಿಸುವುದು.

**

ಹುಳು ಹತೋಟಿಗೆ ಸಿಂಪಡಣೆಗೆ ಕ್ವಿನಾಲ್ ಫಾಸ್ ಅಥವಾ ಕ್ಲೋರೊಪೈರಿಫಾಸ್  ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ. ರೈತರು ರಿಯಾಯಿತಿ ಬೆಲೆಯಲ್ಲಿ ಕೊಳ್ಳಬಹುದು.
-ಎಚ್.ಹೊನ್ನದಾಸೇಗೌಡ, ಸಹಾಯಕ ಕೃಷಿ ನಿರ್ದೇಶಕ, ಚಿಕ್ಕನಾಯಕನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.