ಪಾವಗಡ: ಶಂಕರಾಚಾರ್ಯರು ಕೇವಲ ದಾರ್ಶನಿಕರಷ್ಟೇ ಅಲ್ಲ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ ಸಮಾಜ ಸುಧಾರಕರಲ್ಲಿ ಒಬ್ಬರು ಎಂದು ಉಪನ್ಯಾಸಕ ಡಾ.ಪಿ.ಆರ್.ರೇಣುಕಾಪ್ರಸಾದ್ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಭಾನುವಾರ ಶಂಕರ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಪ್ರವಚನದಲ್ಲಿ ಆದಿ ಗುರು ಶಂಕರಾಚಾರ್ಯರು ದಾರ್ಶನಿಕನಾಗಿ, ತತ್ವಜ್ಞಾನಿಯಾಗಿ ವಿಶ್ವಕ್ಕೆ ಬೆಳಕು ನೀಡಿದ ಮಹಾನ್ ಚೇತನ ಎಂದರು.
ಹಿಂದೂ ಸಂಸ್ಕೃತಿ ಅವನತಿಯ ಅಂಚಿನಲ್ಲಿದ್ದಾಗ ಧರ್ಮವನ್ನು ಕಾಪಾಡುವ ಸಲುವಾಗಿ ರಾಷ್ಟ್ರಾದ್ಯಂತ ನಾಲ್ಕು ಪೀಠಗಳನ್ನು ಸ್ಥಾಪಿಸಿ ಆ ಮೂಲಕ ಭರತ ಸಂಸ್ಕೃತಿಗೆ ಪುನಶ್ಚೇತನ ನೀಡಿದರು. ಜತೆಗೆ ಸನಾತನ ಭಾರತ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪಸರಿಸಿದರು ಎಂದು ತಿಳಿಸಿದರು.
ಅದ್ವೈತ ಸಿದ್ಧಾಂತದ ಮೂಲಕ ಮನುಕುಲವೆಲ್ಲ ಒಂದೇ. ಇಲ್ಲಿ ಎಲ್ಲರೂ ಸಮಾನರು ಎನ್ನುವ ತತ್ವ ಸಾರಿದರು. ಏಳನೇ ಶತಮಾನದಲ್ಲಿ ದೇವರು, ಜಾತಿಗಳ ಹೆಸರಿನಲ್ಲಾಗುತ್ತಿದ್ದ ಘರ್ಷಣೆ ತಡೆಯುವ ಮೂಲಕ ಸಮಾಜ ಸುಧಾರಕ ಎಂದೆನಿಸಿಕೊಂಡರು.
ಶಂಕರ ಜಯಂತಿ ಪ್ರಯುಕ್ತ ಪಟ್ಟಣದ ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಸಾಮೂಹಿಕ ಉಪನಯನ, ವಿವಿಧ ಪೂಜೆ ನಡೆದವು. ತಾಲ್ಲೂಕಿನ ಸಂಕಾಪುರದಲ್ಲಿಯೂ ಶಂಕರಾಚಾರ್ಯರ ಆರಾಧನೆ ಏರ್ಪಡಿಸಲಾಗಿತ್ತು.
ನಾಗಲಮಡಿಕೆ ಸುಬ್ರಹ್ಮಣ್ಯ ಸ್ವಾಮಿ ದೇಗುಲದ ಪ್ರಧಾನ ಅರ್ಚಕ ಬದ್ರಿನಾಥ್, ನಗರ ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ ಚೆಲುವರಾಜನ್, ಕಾರ್ಯಾಧ್ಯಕ್ಷ ಎಂ.ಎನ್.ರಘುನಾಥಶರ್ಮ, ಖಜಾಂಚಿ ಪಿ.ಎಸ್.ಅನಿಲ್ ಕುಮಾರ್, ಪದಾಧಿಕಾರಿ ಎಂ.ಎಸ್.ವಿಶ್ವನಾಥ್, ವಕೀಲ ಯಜ್ಞನಾರಾಯಣ ಶರ್ಮ, ಕಾಮಾಕ್ಷಿ ಯಜ್ಞನಾರಾಯಣ್, ಚಂದ್ರಿಕಾ ಶ್ರೀನಾಥ್, ಶ್ರೀದೇವಿ ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.
ಶಂಕರ ಜಯಂತಿ ಆಚರಣೆ
ಹುಳಿಯಾರು: ಪಟ್ಟಣದ ಅನಂತಶಯನ ರಂಗನಾಥಸ್ವಾಮಿ ದೇವಾಲಯದಲ್ಲಿ ಶಂಕರ, ಗಾಯತ್ರಿ, ರಾಮಾನುಜ ಜಯಂತಿಯನ್ನು ವಿಪ್ರ ಸಮಾಜದಿಂದ ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು
ಶಂಕರ, ರಾಮಾನುಜ, ಗಾಯತ್ರಿ ದೇವಿಯ ಭಾವಚಿತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಎಚ್.ಎಲ್.ಲಕ್ಷ್ಮಿನರಸಿಂಹಯ್ಯ ಶಂಕರ ಭಗವತ್ಪಾದರು ಅದ್ವೈತ ತತ್ವವನ್ನು ಪ್ರತಿಪಾದಿಸಿ ಸನಾತನ ಹಿಂದೂ ಧರ್ಮವನ್ನು ಜಗತ್ತಿಗೆ ಸಾರಿ ಹೇಳಿದ ಮಹಾ ದಾರ್ಶನಿಕರು ಎಂದರು.
ವಿಪ್ರ ಮಹಿಳೆಯರಿಂದ ಶಂಕರಾಚಾರ್ಯ ವಿರಚಿತ ಸೌಂದರ್ಯಲಹರಿ, ಆನಂದಸಿಂಧು, ರಾಮ ಭುಜಂಘಾಪ್ರಯಾತ, ಹರಿಸ್ತುತಿ, ಶಿವಾನಂದಲಹರಿಯನ್ನು ಸಾಮೂಹಿಕವಾಗಿ ಪಠಿಸಲಾಯಿತು.
ಶಂಕರ ಭಜನೆ, ಮಹಾ ಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು. ಸೀತಾರಾಮ ಪ್ರತಿಷ್ಠಾನದ ಅಧ್ಯಕ್ಷ ನರೇಂದ್ರಬಾಬು, ಉಪಾಧ್ಯಕ್ಷ ಎಂ.ಎ.ಲೋಕೇಶಣ್ಣ, ಕಾರ್ಯದರ್ಶಿ ವಿಶ್ವನಾಥ್, ರಂಗನಾಥ್ ಪ್ರಸಾದ್, ಸತ್ಯನಾರಾಯಣ, ಅಶ್ವತ್ ನಾರಾಯಣ ಇತರರು ಪಾಲ್ಗೊಂಡಿದ್ದರು.
ವೈಷ್ಣವ ಸಮಾಜದಿಂದ ರಂಗನಾಥಸ್ವಾಮಿ ದೇವಾಲಯದಲ್ಲಿ ರಾಮಾನುಜ ಜಯಂತಿ ಆಚರಿಸಲಾಯಿತು. ಅರ್ಚಕ ಪದ್ಮರಾಜು, ಶೇಷಣ್ಣ ವಿಶೇಷ ಪೂಜೆ ಸಲ್ಲಿಸಿದರು. ರಾಮಾನುಜ ಭಜನಾ ಮಂಡಳಿ ಸದಸ್ಯರು ಭಜನೆ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.