ADVERTISEMENT

ಮೂರೇ ವರ್ಷದಲ್ಲಿ ₹60 ಲಕ್ಷ

ರೈತರ ಪಾಲಿಗೆ ಬಂಗಾರವಾದ ‘ಸಿದ್ದು’, ‘ಶಂಕರ’ ಹಲಸಿನ ತಳಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 1:47 IST
Last Updated 16 ಡಿಸೆಂಬರ್ 2020, 1:47 IST
‘ಶಂಕರ’ ತಳಿಯ ಹಲಸಿನ ಹಣ್ಣು
‘ಶಂಕರ’ ತಳಿಯ ಹಲಸಿನ ಹಣ್ಣು   

ತುಮಕೂರು: ಒಂದು ಹಲಸಿನ ಮರ ವರ್ಷಕ್ಕೆ ಎಷ್ಟು ಆದಾಯ ತಂದುಕೊಡಬಲ್ಲದು ಎನ್ನುವ ಪ್ರಶ್ನೆಯನ್ನು ರೈತರ ಮುಂದಿಟ್ಟರೆ ಅವರ ಲೆಕ್ಕ ಗರಿಷ್ಠ ₹ 1 ಲಕ್ಷ ಮೀರುವುದಿಲ್ಲ. ಆದರೆ, ಜಿಲ್ಲೆಯ ಚೇಳೂರಿನ ‘ಸಿದ್ದು’ ಹಲಸು ಮತ್ತು ಚೌಡ್ಲಾಪುರದ ‘ಶಂಕರ’ ಹಲಸಿನ ತಳಿಯ ಮರಗಳು ರೈತರ ಪಾಲಿಗೆ ಬಂಗಾರವಾಗಿವೆ.

2018ರಿಂದ ಇಲ್ಲಿಯವರೆಗೆ ‘ಸಿದ್ದು’ ಹಲಸಿನ ಮರ ಮಾಲೀಕರಿಗೆ ₹ 60 ಲಕ್ಷ ಆದಾಯ ತಂದುಕೊಟ್ಟರೆ, ‘ಶಂಕರ’ ಹಲಸಿನ ಮರ ಒಂದು ವರ್ಷದಲ್ಲಿ ₹ 8 ಲಕ್ಷ ಆದಾಯ ನೀಡಿದೆ.

ತುಮಕೂರು ಹೊರವಲಯದ ಹಿರೇಹಳ್ಳಿಯ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) 2017ರಲ್ಲಿ ‘ಸಿದ್ದು’ ಮತ್ತು 2019ರಲ್ಲಿ ‘ಶಂಕರ’ ಹಲಸಿನ ತಳಿಯನ್ನು ದೇಶದ ಅತ್ಯುತ್ತಮ ಹಲಸಿನ ತಳಿಗಳು ಎಂದು ಗುರುತಿಸಿದೆ. 2018ರಿಂದ ‘ಸಿದ್ದು’ ಮತ್ತು 2020ರಿಂದ ‘ಶಂಕರ’‌ ತಳಿಯ ಮರದ ಟಿಸಿಲುಗಳಿಂದ ಸಸಿಗಳನ್ನು ಕಸಿಕಟ್ಟಿ ಮಾರಾಟ ಮಾಡುತ್ತಿದೆ.

ADVERTISEMENT

ಒಂದು ಸಸಿಗೆ ಐಐಎಚ್‌ಆರ್‌ ₹ 150 ಬೆಲೆ ನಿಗದಿಗೊಳಿಸಿದೆ. ಇದರಲ್ಲಿ ₹ 112 ರೈತರಿಗೆ, ಉಳಿದ ಹಣ ಸಂಸ್ಥೆಗೆ ಸೇರುತ್ತದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಶನಿವಾರ ಆನ್‌ಲೈನ್‌ ಮೂಲಕ ಇಬ್ಬರು ರೈತರಿಗೆ ತಲಾ ₹ 5 ಲಕ್ಷದ ಚೆಕ್‌
ವಿತರಿಸಿದ್ದಾರೆ.

‘ಸಿದ್ದು’ ಹಲಸಿನ ಮಾಲೀಕ ಪರಮೇಶ್ ಮತ್ತು ‘ಶಂಕರ’ ಹಲಸಿನ ಮಾಲೀಕ ಶಂಕರಯ್ಯ ಅವರಿಗೂ ಕಸಿಕಟ್ಟುವಿಕೆ ಮತ್ತು ನಿರ್ವಹಣೆ ಬಗ್ಗೆ ಐಐಎಚ್‌ಆರ್‌ ತರಬೇತಿ ನೀಡಿದೆ. ಪರಮೇಶ್, ಮೂರು ವರ್ಷಗಳಿಂದ ತಮ್ಮ ಮನೆ ಬಳಿಯಲ್ಲಿಯೇ ಸಸಿ ಅಭಿವೃದ್ಧಿಗೊಳಿಸಿ ಒಂದು ಸಸಿಗೆ ₹ 250ರಂತೆ ಮಾರಾಟ ಮಾಡುತ್ತಿದ್ದಾರೆ. ‘ಶಂಕರ’ನ ಮಾಲೀಕರು ಈಗ 5 ಸಾವಿರ ಸಸಿಗಳನ್ನು ಸಿದ್ಧಗೊಳಿಸಿದ್ದಾರೆ.

‘ಸಿದ್ದು ಮರದ ಮಾಲೀಕರಿಗೆ ಇಲ್ಲಿಯವರೆಗೆ ಸಂಸ್ಥೆಯಿಂದ ₹ 15 ಲಕ್ಷ ಮತ್ತು ಶಂಕರ ಮರದ ಮಾಲೀಕರಿಗೆ ₹ 8 ಲಕ್ಷ ಸಂದಾಯವಾಗಿದೆ. ದೇಶದ ವಿವಿಧ ಭಾಗಗಳ ಜನರು ಸದ್ಯ ಐಐಎಚ್‌ಆರ್‌ಗೆ 30 ಸಾವಿರಕ್ಕೂ ಹೆಚ್ಚು ಸಸಿಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ಈ ತಳಿಗಳಿಗಾಗಿ ಸಂಸ್ಥೆಗೆ ನಿತ್ಯವೂ ಜನರು ಬರುತ್ತಿದ್ದಾರೆ’ ಎಂದು ತುಮಕೂರಿನ ಐಐಎಚ್‌ಆರ್‌ ಹಿರಿಯ ವಿಜ್ಞಾನಿ ಡಾ.ಕರುಣಾಕರನ್ ಮಾಹಿತಿ ನೀಡಿದರು.

‘ಹೆಸರುಘಟ್ಟದ ಐಐಎಚ್‌ಆರ್ ಸಂಸ್ಥೆಯ ನಿರ್ದೇಶಕ ಡಾ.ಎಂ.ಆರ್.ದಿನೇಶ್ ಅವರ ಆಸಕ್ತಿಯ ಫಲವಾಗಿ ರೈತರಿಗೆ ಇಷ್ಟು ಅನುಕೂಲವಾಗಿದೆ. ಜಿಲ್ಲೆಯ ಹುಣಸೆ, ಜಂಬೂನೇರಳೆಯ ತಳಿಗೂ ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ದೊರೆಕಿಸಬೇಕು ಎನ್ನುವ ದಿಕ್ಕಿನಲ್ಲಿ ಸಂಶೋಧನೆ ನಡೆಯುತ್ತಿದೆ’ ಎಂದರು.

‘ನಾವು ನಮ್ಮ ಮನೆಯ ಬಳಿಯೇ ಸಸಿಗಳನ್ನು ಕಸಿ ಕಟ್ಟುತ್ತಿದ್ದೇವೆ. 20 ಸಾವಿರಕ್ಕೂ ಹೆಚ್ಚು ಸಸಿಗಳನ್ನು ಮಾರಾಟ ಮಾಡಿದ್ದೇವೆ. ಇದರಿಂದಲೇ ಮೂರು ವರ್ಷಗಳಲ್ಲಿ ₹ 40 ಲಕ್ಷಕ್ಕೂ ಹೆಚ್ಚು ಆದಾಯ ಬಂದಿದೆ. ಹೊರರಾಜ್ಯಗಳಿಂದಲೂ ಸಸಿಗಳಿಗೆ ಬೇಡಿಕೆ ಇದೆ. 25 ಸಾವಿರ ಸಸಿಗಳನ್ನು ಈಗಾಗಲೇ ಮುಂಗಡವಾಗಿ ಕಾಯ್ದಿರಿಸಿದ್ದು ಮೇ–ಜೂನ್‌ಗೆ ನೀಡಲಾಗುವುದು‌’ ಎಂದು ಸಿದ್ದು ಹಲಸಿನ ಮರದ ಮಾಲೀಕ ಪರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.