ತುಮಕೂರು: ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ ಕೇವಲ 11 ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆ. ಪತ್ತೆ ಕಾರ್ಯ ಮತ್ತಷ್ಟು ಚುರುಕುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ನಿರ್ದೇಶಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಕಾರ್ಯಕಾರಿ ಸಮಿತಿ ಹಾಗೂ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ಮಾತನಾಡಿದರು.
2024-25ನೇ ಸಾಲಿನಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳ ತಂಡ 397 ತಪಾಸಣೆಗಳನ್ನು ಮಾತ್ರ ಕೈಗೊಂಡಿದೆ. ಮುಂದಿನ 10 ದಿನಗಳಲ್ಲಿ ಎಲ್ಲ ಕಾರ್ಮಿಕ ನಿರೀಕ್ಷಕರು ತಮ್ಮ ವ್ಯಾಪ್ತಿಯ ಕಾರ್ಖಾನೆ, ಮಾರಾಟ ಮಳಿಗೆ, ತೆಂಗಿನ ಕಾಯಿ ಸಗಟು ವ್ಯಾಪಾರ ಸ್ಥಳ, ಗ್ಯಾರೇಜ್, ಇತರೆ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದರು.
ಕಾರ್ಮಿಕ ಅಧಿಕಾರಿ ಕೆ.ತೇಜಾವತಿ, ‘ಮೂರು ಪ್ರಕರಣಗಳಲ್ಲಿ ಮಾಲೀಕರ ಮೇಲೆ ಮೊಕದ್ದಮೆ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ. 4 ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ದಾಖಲಿಸಲಾಗಿದೆ. ಉಳಿದ ಮಕ್ಕಳನ್ನು ಪೋಷಕರ ವಶಕ್ಕೆ ನೀಡಲಾಗಿದೆ’ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ್, ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ನಗರಾಭಿವೃದ್ಧಿ ಕೋಶದ ಉಪನಿರ್ದೇಶಕ ಯೋಗಾನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮ ಅಧಿಕಾರಿ ದಿನೇಶ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.