ADVERTISEMENT

1100 ಸಂಘದಲ್ಲಿಯೂ ಬಿಎಂಸಿ ಘಟಕ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2017, 9:09 IST
Last Updated 27 ನವೆಂಬರ್ 2017, 9:09 IST

ತುಮಕೂರು: ‘ರೈತರು ಮತ್ತು ಹೈನುಗಾರರಿಂದ ಖರೀದಿಸಿದ ಹಾಲು ಕೆಡದಂತೆ ಸಂರಕ್ಷಿಸುವ ಉದ್ದೇಶದಿಂದ ಜಿಲ್ಲೆಯಲ್ಲಿರುವ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿಯೂ ಬಿಎಂಸಿ (ಬೃಹತ್‌ ಹಾಲಿನ ಶೀತಲೀಕರಣ ಘಟಕ) ಘಟಕವನ್ನು ಹಂತ ಹಂತವಾಗಿ ತೆರೆಯಲಾಗುವುದು’ ಎಂದು ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ತಿಳಿಸಿದ್ದಾರೆ.

ಮಲ್ಲಸಂದ್ರದ ತುಮಕೂರು ಹಾಲು ಒಕ್ಕೂಟದ ಕಚೇರಿಯ ಆವರಣದಲ್ಲಿ ರಾಷ್ಟ್ರೀಯ ಹಾಲು ದಿನಾಚರಣೆ, ಸಹಕಾರ ಸಪ್ತಾಹ ಹಾಗೂ ಡಾ.ವರ್ಗೀಸ್ ಕುರಿಯನ್ ಅವರ ಜನ್ಮ ಜಯಂತಿ ಕಾರ್ಯಕ್ರಮ ಅಂಗವಾಗಿ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಮತ್ತು ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು ಒಕ್ಕೂಟದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ 28 ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಮಾತ್ರ ಬಿಎಂಸಿ ಘಟಕಗಳಿದ್ದವು. ಪ್ರಸ್ತುತ 100 ಡೇರಿಗಳಲ್ಲಿ ಈ ಸೌಲಭ್ಯವಿದೆ. ಜಿಲ್ಲೆಯ 1100 ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿಯೂ ಈ ಕೇಂದ್ರ ಸ್ಥಾಪಿಸುವ ಗುರಿಯನ್ನು ಒಕ್ಕೂಟ ಹೊಂದಿದೆ’ ಎಂದರು.

ADVERTISEMENT

ನಂದಿನಿ ಹಾಲಿನ ಗುಣಮಟ್ಟ ಉತ್ತಮವಾಗಿರುವುದರಿಂದ ಮಹಾರಾಷ್ಟ್ರ ಮತ್ತು ಆಂದ್ರ ಪ್ರದೇಶದಲ್ಲಿ ಸಾವಿರಾರು ಲೀಟರ್ ಹಾಲು ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ ಸಕಾಲಕ್ಕೆ ಬಟವಾಡೆ ಮಾಡಲು ಸಾಧ್ಯವಾಗಿದೆ. ಹಸುವಿನ ಆರೋಗ್ಯ ಮತ್ತು ಹಾಲಿ ಗುಣಮಟ್ಟ ಕಾಪಾಡಿಕೊಳ್ಳಲು ಹಸುವಿಗೆ ಸಮತೋಲನ ಆಹಾರ ನೀಡಬೇಕು ಎಂದರು.

ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮುನೇಗೌಡ ಮಾತನಾಡಿ, ’ಸಂಘದ ವತಿಯಿಂದ ತುಮಕೂರು ನಗರದ ಸಿದ್ದಗಂಗಾ ಬಡಾವಣೆಯಲ್ಲಿ ಹೆಣ್ಣು ಮಕ್ಕಳ ಉಚಿತ ಹಾಸ್ಟೆಲ್‌ ನಡೆಸಲಾಗುತ್ತಿದೆ. ಹಾಲು ಕರೆಯುವ ಹಸುಗಳು ಸಾವಿಗೀಡಾದರೆ ಪರಿಹಾರ ಧನ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.