ಗುಬ್ಬಿ: ತಾಲ್ಲೂಕಿನ ಸಿಎಸ್ ಪುರ ಹೋಬಳಿ ಸಿ.ಯಡವನಹಳ್ಳಿ ಗ್ರಾಮದ ಅಂಗನವಾಡಿಯಲ್ಲಿ ಶುಕ್ರವಾರ ಕುಕ್ಕರ್ ಸಿಡಿದು 14 ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಅಂಗನವಾಡಿಯಲ್ಲಿ ಮಧ್ಯಾಹ್ನ ಮಕ್ಕಳಿಗೆ ಪೌಷ್ಟಿಕ ಆಹಾರ ಸಿದ್ಧಪಡಿಸುತ್ತಿದ್ದಾಗ ಆಕಸ್ಮಿಕವಾಗಿ ಕುಕ್ಕರ್ ಸಿಡಿದಿದೆ.
ಅಂಗನವಾಡಿ ಕಟ್ಟಡ ಹಳೆಯದ್ದಾಗಿದ್ದು, ಕಿರಿದಾಗಿದೆ. ಹೊಸ ಕಟ್ಟಡ ನಿರ್ಮಾಣ ಸಂಬಂಧ ಸರ್ಕಾರಕ್ಕೆ ನಿವೇಶನ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಲಾಗಿದೆ. ಈವರೆಗೆ ಮಂಜೂರು ಮಾಡಿಕೊಡದ ಕಾರಣ ಹೊಸ ಕಟ್ಟಡ ನಿರ್ಮಾಣವಾಗಿಲ್ಲ. ನಿವೇಶನ ಮಂಜೂರಾದರೆ ಹೊಸ ಕಟ್ಟಡ ಕಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ತಿಳಿಸಿದರು.
‘ಮಕ್ಕಳನ್ನು ದೂರದ ಶಾಲೆಗಳಿಗೆ ಕಳಿಸುವ ಬದಲು ಗ್ರಾಮದಲ್ಲಿರುವ ಅಂಗನವಾಡಿಗೆ ಕಳುಹಿಸುತ್ತಿದ್ದೆವು. ಘಟನೆ ನಂತರ ಮಕ್ಕಳನ್ನು ಕಳುಹಿಸಲು ಭಯಪಡುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ತುರ್ತುಕ್ರಮ ಕೈಗೊಂಡು ಹೊಸ ಅಂಗನವಾಡಿ ನಿರ್ಮಿಸಿ ಕೊಡಬೇಕು’ ಎಂದು ಒತ್ತಾಯಿಸಿದರು.
ಸಿಡಿಪಿಒ ಮಹೇಶ್, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ತುರ್ತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.