ADVERTISEMENT

ತುಮುಲ್: ₹154 ಕೋಟಿಯ ಮೇಗಾ ಡೇರಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 4:52 IST
Last Updated 11 ನವೆಂಬರ್ 2021, 4:52 IST
ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ ಬುಧವಾರ ನಡೆಯಿತು. ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ, ನಿರ್ದೇಶಕರಾದ ಎಂ.ಕೆ.ಪ್ರಕಾಶ್, ಕೊಂಡವಾಡಿ ಚಂದ್ರಶೇಖರ್, ಹಳೆಮನೆ ಶಿವನಂಜಪ್ಪ, ಜಿ.ಚಂದ್ರಶೇಖರ್, ಡಿ.ಕೃಷ್ಣಕುಮಾರ್, ಎಚ್.ಕೆ.ರೇಣುಕಾ ಪ್ರಸಾದ್, ಎಸ್.ಆರ್.ಗೌಡ, ಈಶ್ವರಯ್ಯ, ಎಸ್.ಆರ್.ಜಗದೀಶ್, ಚನ್ನಮಲ್ಲಪ್ಪ, ಅಶ್ವತ್ಥನಾರಾಯಣ್ ಉಪಸ್ಥಿತರಿದ್ದರು
ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ ಬುಧವಾರ ನಡೆಯಿತು. ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ, ನಿರ್ದೇಶಕರಾದ ಎಂ.ಕೆ.ಪ್ರಕಾಶ್, ಕೊಂಡವಾಡಿ ಚಂದ್ರಶೇಖರ್, ಹಳೆಮನೆ ಶಿವನಂಜಪ್ಪ, ಜಿ.ಚಂದ್ರಶೇಖರ್, ಡಿ.ಕೃಷ್ಣಕುಮಾರ್, ಎಚ್.ಕೆ.ರೇಣುಕಾ ಪ್ರಸಾದ್, ಎಸ್.ಆರ್.ಗೌಡ, ಈಶ್ವರಯ್ಯ, ಎಸ್.ಆರ್.ಜಗದೀಶ್, ಚನ್ನಮಲ್ಲಪ್ಪ, ಅಶ್ವತ್ಥನಾರಾಯಣ್ ಉಪಸ್ಥಿತರಿದ್ದರು   

ತುಮಕೂರು: ಮೇಗಾ ಡೇರಿ ನಿರ್ಮಾಣ ಮಾಡಲು ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್) ನಿರ್ಧರಿಸಿದ್ದು, ಇದಕ್ಕಾಗಿ ₹154 ಕೋಟಿ ವೆಚ್ಚ ಮಾಡಲಿದೆ.

ಬುಧವಾರ ನಡೆದ ತುಮುಲ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ಮೇಗಾ ಡೇರಿ ನಿರ್ಮಾಣದ ವಿಚಾರ ಪ್ರಸ್ತಾಪವಾಗುತ್ತಲೇ ಬಂದಿದ್ದು, ಈ ಬಾರಿಯೂ ಆದ್ಯತೆ ಪಡೆದುಕೊಂಡಿದೆ. ಆದರೆ ಈವರೆಗೂ ನಿರ್ಮಾಣ ಕೆಲಸಕ್ಕೆ ಚಾಲನೆ ಸಿಕ್ಕಿಲ್ಲ.

ಪ್ರತಿ ದಿನ 10 ಲಕ್ಷ ಲೀಟರ್ ಹಾಲು ಸಂಸ್ಕರಿಸುವ ಮೇಗಾ ಡೇರಿ ಸ್ಥಾಪನೆ ಹಾಗೂ 3 ಲಕ್ಷ ಲೀಟರ್ ಹಾಲನ್ನು ಘನೀಕರಿಸುವ ಕಂಡೆನ್ಸಿಂಗ್ ಘಟಕವನ್ನು ₹154 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಕೋವಿಡ್ ಸಮಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ರೈತರಿಂದ ಖರೀದಿಸುವ ಹಾಲಿನ ದರವನ್ನು ಕಡಿತ ಮಾಡಲಾಗಿತ್ತು. ಡೇರಿ ಆರ್ಥಿಕ ಸ್ಥಿತಿ ಸುಧಾರಿಸಿದ್ದರೂ ಹಾಲು ಖರೀದಿ ದರ ಹೆಚ್ಚಳ ಮಾಡಿಲ್ಲ.

ADVERTISEMENT

ಆಂಧ್ರಪ್ರದೇಶದ ಅಂಗನವಾಡಿ ಮಕ್ಕಳಿಗೆ ಜಿಲ್ಲೆಯಿಂದ 20 ಸಾವಿರ ಲೀಟರ್ ಹಾಲು ಸರಬರಾಜು ಮಾಡಲಾಗುತ್ತಿದೆ. ಆಂಧ್ರಪ್ರದೇಶದ ಪಲಮನೇರು ಎಂಬಲ್ಲಿರುವ ಪರಾಗ್ ಮಿಲ್ಕ್ ಫುಡ್ಸ್‌ಗೆ ಕಳುಹಿಸಿ, ಅಲ್ಲಿ ಬ್ರಿಕ್ ಪ್ಯಾಕೇಜ್ ಮಾಡಿಸಿ, ಅಂಗನವಾಡಿ ಕೇಂದ್ರಗಳಿಗೆ ವಿತರಣೆ ಮಾಡಲಾಗುತ್ತಿದೆ ಎಂದು ವಾರ್ಷಿಕ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಪ್ರತಿ ದಿನ 8.62 ಲಕ್ಷ ಲೀಟರ್ ಹಾಲು ಸಂಗ್ರಹ ಗುರಿ ಹೊಂದಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಆರ್ಥಿಕ ನೆರವು ನೀಡಲು ಉದ್ದೇಶಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ಹೊಸದಾಗಿ ಕಟ್ಟಡ ನಿರ್ಮಿಸುವ 50 ಸಂಘಗಳಿಗೆ ತಲಾ ₹4 ಲಕ್ಷ ಅನುದಾನ, ತಾಲ್ಲೂಕಿಗೆ ಒಂದರಂತೆ 10 ಸಂಘಗಳಿಗೆ ತಲಾ 5 ಲಕ್ಷ ನೆರವು, 30 ಸಂಘಗಳಿಗೆ ತಲಾ ₹2 ಲಕ್ಷದಂತೆ ಬಡ್ಡಿರಹಿತ ಸಾಲ ನೀಡಲು ಯೋಜಿಸಲಾಗಿದೆ.

ಮಿಶ್ರತಳಿ ಹಸುಗಳ ಹಾಲಿನ ಜಿಡ್ಡಿನ ಪ್ರಮಾಣ ಹೆಚ್ಚಿಸಲು ‘ಗೋಧಾರ್ ಶಕ್ತಿ ಬೈಪಾಸ್ ಫ್ಯಾಟ್’ ಪೌಷ್ಟಿಕಾಂಶ ಹೊಂದಿದ ಪೂರಕ ಆಹಾರ ನೀಡಲು ಉದ್ದೇಶಿಸಿದ್ದು, ಅದಕ್ಕಾಗಿ ₹2.88 ಕೋಟಿ ಮೀಸಲಿಡಲಾಗಿದೆ.

ಬೆಂಗಳೂರು ಹಾಗೂ ತುಮಕೂರು ನಗರದಲ್ಲಿ ವಾಕ್‌–ಇನ್ ಕೋಲ್ಡ್ ಸ್ಟೋರ್ ಸ್ಥಾಪಿಸಿ ಗ್ರಾಹಕರಿಗೆ ಸದಾ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳು ದೊರೆಯುವಂತೆ ಮಾಡುವುದು. ತಾಲ್ಲೂಕು ಕೇಂದ್ರಗಳಲ್ಲಿ ಜನಸಂದಣಿ ಇರುವ ಕಡೆಗಳಲ್ಲಿ 10 ನಂದಿನಿ ಕ್ಷೀರ ಮಳಿಗೆ ಆರಂಭಿಸಲು ಉದ್ದೇಶಿಸಲಾಗಿದೆ. ಹಾಲು ಸಂಗ್ರಹ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಎಡೆಯೂರು ಶೀತಲೀಕರಣ ಘಟಕದ ಸಾಮರ್ಥ್ಯವನ್ನು ಹೆಚ್ಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ, ನಿರ್ದೇಶಕರಾದ ಎಂ.ಕೆ.ಪ್ರಕಾಶ್, ಕೊಂಡವಾಡಿ ಚಂದ್ರಶೇಖರ್, ಹಳೆಮನೆ ಶಿವನಂಜಪ್ಪ, ಜಿ.ಚಂದ್ರಶೇಖರ್, ಡಿ.ಕೃಷ್ಣಕುಮಾರ್, ಎಚ್.ಕೆ.ರೇಣುಕಾ ಪ್ರಸಾದ್, ಎಸ್.ಆರ್.ಗೌಡ, ಈಶ್ವರಯ್ಯ, ಎಸ್.ಆರ್.ಜಗದೀಶ್, ಚನ್ನಮಲ್ಲಪ್ಪ, ಅಶ್ವತ್ಥನಾರಾಯಣ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.