ADVERTISEMENT

ಕೊರಟಗೆರೆ | 22 ಪಿಡಿಒಗೆ ನೋಟಿಸ್; ಸಾಮೂಹಿಕ ರಜೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 5:46 IST
Last Updated 27 ಜೂನ್ 2020, 5:46 IST

ಕೊರಟಗೆರೆ: ಅಭಿವೃದ್ಧಿ ಕೆಲಸಗಳಲ್ಲಿ ಪ್ರಗತಿ ಸಾಧಿಸಲು ವಿಫಲರಾಗಿದ್ದಾರೆ ಎಂಬ ಆರೋಪದ ಮೇಲೆ ತಾಲ್ಲೂಕಿನ 21 ಗ್ರಾಮ ಪಂಚಾಯಿತಿಗಳ ಪಿಡಿಒಗಳಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನೋಟಿಸ್ ಜಾರಿಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪಿಡಿಒಗಳು ಎರಡು ತಿಂಗಳು ಸಾಮೂಹಿಕ ರಜೆಮೇಲೆ ತೆರಳುವುದಾಗಿ ಬೆದರಿಕೆ ಹಾಕಿದ್ದಾರೆ.‌

‘ತಾಲ್ಲೂಕಿನಲ್ಲಿ 24 ಗ್ರಾಮ ಪಂಚಾಯಿತಿಗಳಿವೆ. ಪಿಡಿಒಗಳು ಲಾಕ್‌ಡೌನ್‌ ಇದ್ದರೂ ಮೂರು ತಿಂಗಳು ರಜೆ ಪಡೆಯದೆ ಕಾರ್ಯನಿರ್ವಹಿಸಿದ್ದಾರೆ. ಆದರೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ 21 ಪಿಡಿಒಗಳಿಗೆ ನೋಟಿಸ್‌ ನೀಡಿ, ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ’ ಎಂದು ಪಿಡಿಒಗಳು ಆರೋಪಿಸಿದ್ದಾರೆ.

‘ಲಾಕ್‌ಡೌನ್‌ ಸಮಯದಲ್ಲಿ ಪಂಚಾಯಿತಿಯಿಂದ ಕೈಗೊಳ್ಳಬೇಕಾದ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ನರೇಗಾ, ಸ್ವಚ್ಛ ಭಾರತ್ ಮಿಷನ್ ಯೋಜನೆಗಳಲ್ಲಿ ನಿಗದಿತ ಪ್ರಗತಿ ಸಾಧಿಸಲಾಗಿದೆ. ಅಗತ್ಯ ಸಾಮಗ್ರಿಗಳ ಅಲಭ್ಯತೆ, ಕೂಲಿಕಾರರ ಕೊರತೆ ಹಾಗೂ ಫಲಾನುಭವಿಗಳ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿದ್ದರೂ ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ ಶೇ 80ರಷ್ಟು ಪ್ರಗತಿ ಸಾಧಿಸಿದ್ದೇವೆ. ಸಕಾರಣವಿಲ್ಲದೆ ನೋಟಿಸ್‌ ನೀಡಿದ್ದಾರೆ. ಇದರಿಂದಾಗಿ ಪಿಡಿಒಗಳ ಆತ್ಮಸ್ಥೈರ್ಯ ಕುಗ್ಗಿದೆ. ಹಾಗಾಗಿ 2 ತಿಂಗಳು ರಜೆ ನೀಡಬೇಕು’ ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ADVERTISEMENT

ಪಿಡಿಒ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ತಾ.ಪಂ ಇಒಗೆ ಅಧಿಕಾರ ಇಲ್ಲ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗೆ ಮಾತ್ರ ಕಾನೂನಿನಲ್ಲಿ ಅಧಿಕಾರ ಇರುತ್ತದೆ ಎಂದು ಪಿಡಿಒ ಒಬ್ಬರು ತಿಳಿಸಿದರು.

ಪ್ರಗತಿ ಕುಂಟಿತ: ಇಒ

‘ಶೌಚಾಲಯ ಪ್ರಗತಿ, ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಪ್ರಗತಿ ಕುಂಟಿತವಾಗಿದ್ದು, 21 ಪಿಡಿಒಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಪ್ರಗತಿಯಾಗಿರುವ ಬಗ್ಗೆ ವರದಿ ನೀಡಿದರೆ ನೋಟಿಸ್‌ ವಾಪಾಸ್‌ ಪಡೆಯಲಾಗುವುದು. ಪಿಡಿಒಗಳು ಸಾಮೂಹಿಕ ರಜೆ ಕೋರಿ ಪತ್ರ ಬರೆದಿರುವ ಮಾಹಿತಿ ಇಲ್ಲ. ಪರಿಶೀಲಿಸುತ್ತೇನೆ’ ಎಂದು ತಾ.ಪಂ ಕಾರ್ಯನಿರ್ವಹಣಾ ಅಧಿಕಾರಿ ಎಸ್.ಶಿವಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.